ಹೊಸದಿಲ್ಲಿ: ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಛತ್ತೀಸ್‍ಗಢದ ಡೊಂಗ್ರಾಘರ್‍ನಲ್ಲಿ ನಿಧನರಾದರು. ಅವರು 3 ದಿನಗಳ ಹಿಂದೆ ‘ಸಲ್ಲೇಖನ’ವನ್ನು (ಸಮಾಧಿ ಪ್ರಕ್ರಿಯೆ) ಪ್ರಾರಂಭಿಸಿದ್ದರು. ಇದರ ಅಡಿಯಲ್ಲಿ, ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಫೆಬ್ರವರಿ 18ರಂದು ಮುಂಜಾನೆ 2.35ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.
1946ರ ಅಕ್ಟೋಬರ್ 10ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗದಲ್ಲಿ ಅವರು ಜನಿಸಿದ್ದರು.
ಛತ್ತೀಸ್‍ಗಢ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು, ಛತ್ತೀಸ್‍ಗಢದ ರಾಜನಂದಗಾವ್ ಜಿಲ್ಲೆಯಲ್ಲಿರುವ ಪ್ರಖ್ಯಾತ ತೀರ್ಥಕ್ಷೇತ್ರವಾದ ದೊಂಗ್ರಾಘರ್‍ಗೆ ಭೇಟಿ ನೀಡಿ, ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಶ್ರೀಗಳಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಆಚಾರ್ಯ 108 ಶ್ರೀ ವಿದ್ಯಾಸಾಗರ ಮಹಾರಾಜ್ ಜೀಯವರ ಅಸಂಖ್ಯಾತ ಭಕ್ತರ ಜತೆ ನಾವಿದ್ದೇವೆ. ಸಮಾಜಕ್ಕೆ ಅದರಲ್ಲೂ ಮುಖ್ಯವಾಗಿ ಆಧ್ಯಾತ್ಮಿಕ ಸ್ಫೂರ್ತಿ, ಬಡತನ ನಿರ್ಮೂಲನೆ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಸಲ್ಲಿಸಿದ ಗಣನೀಯ ಕೊಡುಗೆಗಳಿಗಾಗಿ ಅವರನ್ನು ಮುಂದಿನ ಪೀಳಿಗೆ ಕೂಡಾ ನೆನಪಿಟ್ಟುಕೊಳ್ಳುತ್ತದೆ” ಎಂದು ಅವರು ಬಣ್ಣಿಸಿದ್ದಾರೆ.