ಬೆಂಗಳೂರು:
ಬೆಂಗಳೂರು ನಗರ ಜಿಲ್ಲೆ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಖಾತ್ರಿಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ರಾಮಚಂದ್ರಪ್ಪ ಮತ್ತಿತರರು ಆಯೋಗಕ್ಕೆ ಮಂಗಳವಾರ ದೂರು ಸಲ್ಲಿಸಿದರು. ಈ ಕ್ಷೇತ್ರದಲ್ಲಿ ಸಿ.ಕೆ. ರಾಮಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಸೌಮ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ದೂರು ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಕಳೆದ ಎರಡ್ಮೂರು ದಿನಗಳಿಂದ ಎಲ್ಲಾ ಸಮಾಜಘಾತುಕರು ಜಯನಗರದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬೆಂಗಳೂರಿನ ಶೇ. 50 ರಷ್ಟು ರೌಡಿಗಳು ಜಯನಗರದಲ್ಲಿದ್ದಾರೆ ಎಂದು ಅವರು ಆರೋಪಿಸಿದರು.