
ಬೆಂಗಳೂರು: ಬೆಂಗಳೂರು ದಕ್ಷಿಣದ ಜೆ.ಪಿ. ಪಾರ್ಕ್ನಲ್ಲಿ ಜಯಪ್ರಕಾಶ್ ನಾರಾಯಣರ ಪುತ್ಥಳಿಯನ್ನು ಮರುಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಉದ್ಯಾನದ ಈಜುಕೊಳ, ಯೋಗಶಾಲೆ, ಜಿಮ್, ಮಕ್ಕಳ ಆಟದ ಮೈದಾನ ಹಾಗೂ ಟಾಯ್ ಟ್ರೈನ್ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು.
‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಭಾಗವಾಗಿ ಭಾನುವಾರ ಮುಂಜಾನೆ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದ ಶಿವಕುಮಾರ್ ಅವರು ಉದ್ಯಾನದ ವಿವಿಧ ಸಮಸ್ಯೆಗಳ ಕುರಿತು ನಾಗರಿಕರಿಂದಲೇ ಅಹವಾಲುಗಳನ್ನು ಸ್ವೀಕರಿಸಿದರು. ಬಿಬಿಎಂಪಿ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹಾಗೂ ಜೆ.ಪಿ. ಪಾರ್ಕ್ ಹಿತರಕ್ಷಣಾ ಸಮಿತಿಯ ಸದಸ್ಯರೊಂದಿಗೆ ಅವರು ಪರಿಶೀಲನೆ ನಡೆಸಿ ಮೂಲಸೌಕರ್ಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
“ಜೆ.ಪಿ. ಪಾರ್ಕ್ನಲ್ಲಿರುವ ಟಾಯ್ ಟ್ರೈನ್, ಶೌಚಾಲಯಗಳು ಮತ್ತು ಜಿಮ್ಗಳ ಸ್ಥಿತಿ ತಕ್ಷಣ ಸುಧಾರಿಸಬೇಕು. ಎರಡು ದಿನಗಳೊಳಗೆ ಎಲ್ಲಾ ಶೌಚಾಲಯಗಳು ಸಾರ್ವಜನಿಕರಿಗೆ ಮುಕ್ತವಾಗಿರಬೇಕು,”
ಎಂದು ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಮ್ ಉಪಕರಣಗಳು ಹಾಳಾಗಿರುವುದನ್ನು ಕಂಡು ಅವರು ಅಧಿಕಾರಿಗಳ ಮೇಲೆ ಗರಂ ಆಗಿ ತಕ್ಷಣದ ದುರಸ್ತಿ ಕಾರ್ಯ ಆರಂಭಿಸಲು ಸೂಚಿಸಿದರು. ಅಲ್ಲದೆ ಉದ್ಯಾನದ ಕೆರೆಗೆ ಈಗ ಮಳೆನೀರು ಹರಿಯುತ್ತಿಲ್ಲ ಎಂಬ ನಾಗರಿಕರ ಅಹವಾಲು ಕೇಳಿ, “ಕಾಲುವೆ ಮುಚ್ಚಿದಿದ್ದರೆ ಅದನ್ನು ತಕ್ಷಣ ತೆರೆಯಿಸಬೇಕು,” ಎಂದು ಹೇಳಿದರು.

ಮಾದಕ ವ್ಯಸನಿಗಳ ಅಡ್ಡೆಯಾಗಿರುವ ಪ್ರದೇಶಗಳ ಕುರಿತು ದೂರ ಬಂದಾಗ, “ಉದ್ಯಾನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಪೊಲೀಸರು ಪೆಟ್ರೋಲಿಂಗ್ ನಡೆಸಬೇಕು ಮತ್ತು ವ್ಯಸನಿಗಳನ್ನು ನಿಯಂತ್ರಿಸಬೇಕು,” ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಜಿಬಿಎ ವ್ಯಾಪ್ತಿಯ ಯಾವುದೇ ಸಮಸ್ಯೆಗಾಗಿ ನಾಗರಿಕರು 1533 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ನಾನು ಸ್ವತಃ ಉದ್ಯಾನದ ಸಮಸ್ಯೆಗಳನ್ನು ವಿಡಿಯೋ ಚಿತ್ರೀಕರಿಸಿದ್ದೇನೆ ಮತ್ತು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ,”
ಎಂದು ಶಿವಕುಮಾರ್ ಹೇಳಿದರು.
ಅವರು ನಾಗರಿಕರಿಗೆ ಈಗ ಮೊಬೈಲ್ ಆಪ್ ಮೂಲಕ ಕಸ, ರಸ್ತೆ ಗುಂಡಿ ಮೊದಲಾದ ಸಮಸ್ಯೆಗಳನ್ನು ನೇರವಾಗಿ ವರದಿ ಮಾಡುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇಳೆ ಶಿವಕುಮಾರ್ ತಮ್ಮ 55 ವರ್ಷಗಳ ಹಿಂದಿನ ಶಾಲಾ ಸ್ನೇಹಿತ ಮಾಧವ ನಾಯಕ್ ಅವರನ್ನು ಭೇಟಿ ಮಾಡಿದ ಸಂತಸವನ್ನು ಹಂಚಿಕೊಂಡರು.
“ನಾನು ಕಾರ್ಮೆಲ್ ಶಾಲೆಯಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿ ಚುನಾವಣೆಗೆ ನಿಂತಿದ್ದೆ. ಮತ ಎಣಿಕೆ ಏಜೆಂಟ್ ಆಗಿದ್ದು ಈತನೇ. ಗಣಿತದಲ್ಲಿ ತುಂಬಾ ಬುದ್ಧಿವಂತ ವಿದ್ಯಾರ್ಥಿ,”
ಎಂದು ನಗುಮುಖದಿಂದ ನೆನಪು ಹಂಚಿಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್,
“ಸರ್ಕಾರಕ್ಕೆ ಎರಡು ವರ್ಷವಾದ ಮೇಲೆ ಮಾತ್ರ ಜನರ ಮಾತು ಕೇಳುತ್ತಿದೆ ಎನ್ನುವುದು ತಪ್ಪು. ಅಧಿಕಾರಕ್ಕೆ ಬಂದ ದಿನದಿಂದಲೇ ಜನರ ಅಹವಾಲುಗಳನ್ನು ಕೇಳುತ್ತಿದ್ದೇವೆ. ‘ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದ ಮೂಲಕ ಸಾವಿರಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ,”
ಎಂದು ಹೇಳಿದರು.
ಜೆ.ಪಿ. ಪಾರ್ಕ್ ಗುತ್ತಿಗೆದಾರರಿಗೆ 10 ವರ್ಷಗಳಿಂದ ಬಿಲ್ ಬಿಡುಗಡೆ ಆಗಿಲ್ಲ ಎನ್ನುವ ಆರೋಪದ ಕುರಿತು ಅವರು, “ಇದರ ಬಗ್ಗೆ ತನಿಖೆ ನಡೆಸುತ್ತೇನೆ,” ಎಂದರು.
“ಇಂದು ಅಹವಾಲು ನೀಡಿದ ನಾಗರಿಕರ ದೂರವಾಣಿ ಸಂಖ್ಯೆಗಳು ನನ್ನ ಬಳಿ ಇವೆ. ಬಿಬಿಎಂಪಿ ಅಧಿಕಾರಿಗಳು ಅವರನ್ನೇ ಸಂಪರ್ಕಿಸಿ ಸಮಸ್ಯೆ ಪರಿಹಾರ ಮಾಡುತ್ತಾರೆ,”
ಎಂದು ಭರವಸೆ ನೀಡಿದರು.
ಅವರು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರನ್ನು “ಯುವ, ಉತ್ಸಾಹಿ ಮತ್ತು ಜನಪ್ರಿಯ ಅಧಿಕಾರಿಯೆಂದು” ಕೊಂಡಾಡಿದರು.
ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ ಅಡ್ಡಿ ತಂದರೆಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್,
“ಅವರಿಗೆ ರಾಜಕೀಯ ಮುಖ್ಯ. ಈ ಕಾರ್ಯಕ್ರಮದ ಜೊತೆ ಆರ್ಎಸ್ಎಸ್ಗೆ ಯಾವುದೇ ಸಂಬಂಧವಿಲ್ಲ. ಅವರು ತೋರಿದ ವರ್ತನೆ ಆ ಸಂಸ್ಥೆಯನ್ನೇ ಅವಮಾನಪಡಿಸಿದೆ, ನನಗಲ್ಲ,”
ಎಂದರು.
“ಜನರು ಅವರ ವರ್ತನೆಗೆ ಬೇಸತ್ತು ಅವರನ್ನು ಹಿಂಬಾಲಿಸಿ ಹೊರಹಾಕಿದರು. ಜನರ ತಾಳ್ಮೆ ಪರೀಕ್ಷಿಸಬಾರದು,”
ಎಂದು ಅವರು ಕಟುವಾಗಿ ಪ್ರತಿಕ್ರಿಯಿಸಿದರು.
ಡಿ.ಕೆ. ಸುರೇಶ್ ಸೋಲಿನ ಬಳಿಕ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಪ್ರಶ್ನೆಗೆ ಅವರು,
“ಅದನ್ನು ತನಿಖಾ ಸಂಸ್ಥೆಗಳು ನೋಡಿಕೊಳ್ಳಲಿ. ದೂರು ನೀಡಬೇಕಾದರೆ ಕಾನೂನು ಮಾರ್ಗದಲ್ಲೇ ನೀಡಲಿ,”
ಎಂದು ಹೇಳಿದರು.