ಬೆಂಗಳೂರು/ರಾಮನಗರ:
ಬಿಜೆಪಿ ಜತೆ ಮೈತ್ರಿ ಸಂಬಂಧಿಸಿದಂತೆ ಪಕ್ಷದ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಉಂಟಾಗಿದ್ದ ಕೆಲ ಗೊಂದಲಗಳನ್ನು ಜೆಡಿಎಸ್ ವರಿಷ್ಠ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿವಾರಿಸಿದರು ಅಲ್ಲದೆ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಅಲ್ಪಸಂಖ್ಯಾತರಿಗೆ ಜೆಡಿಎಸ್ ಅನ್ಯಾಯ ಮಾಡಿಲ್ಲ ಎಂದರು.
ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಅನೇಕ ಆಹ್ವಾನಿತ ಮುಖಂಡರ ಸಭೆಯಲ್ಲಿ ಫಾರೂಕ್ ಅವರು ಮಾತನಾಡಿ, ಅಲ್ಪಸಂಖ್ಯಾತರಾದ ನಾವು ನಮ್ಮ ಆಚಾರ ವಿಚಾರ, ಆಹಾರ ಪದ್ಧತಿ ಇತ್ಯಾದಿಗಳಿಂದ ಕೆಲವು ಸಮಸ್ಯೆ ಎದುರಿಸುತ್ತಿದ್ದೇವೆ. ಆ ವಿಷಯದಲ್ಲಿ ಪಕ್ಷ ನಮ್ಮ ಜತೆ ನಿಂತಿದೆ ಎಂದರು.
ಯಾರೇ ಪಕ್ಷ ಬಿಟ್ಟರೂ ನಾನು ಪಕ್ಷ ಬಿಡಲ್ಲ. ಇಪ್ಪತ್ತು ತಿಂಗಳ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರದ ಕಾಲದಲ್ಲಿ ಅಲ್ಪಸಂಖ್ಯಾತರಿಗೆ ಏನಾದರೂ ತೊಂದರೆ ಆಯಿತಾ? ಕುಮಾರಸ್ವಾಮಿ ಅವರು ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟರು. ಎಲ್ಲೂ ಕೂಡ ನಮಗೆ ಜೆಡಿಎಸ್ ಅಥವಾ ಕುಮಾರಸ್ವಾಮಿ ಅವರಿಂದ ಅನ್ಯಾಯ ಆಗಿಲ್ಲ. ನಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭರವಸೆ ನೀಡಿದ್ದಾರೆ ಇಂದು ಬಿ.ಎಂ.ಫಾರೂಕ್ ಅವರು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಮುಸ್ಲಿಮರ ನಡುವಿನ ಬಾಂಧವ್ಯ ಬಹಳ ಚೆನ್ನಾಗಿದೆ. ಅದನ್ನು ಕೆಡಿಸುವ ಶಕ್ತಿಗಳ ಬಗ್ಗೆ ಮುಸ್ಲೀಮರು ಆಲೋಚನೆ ಮಾಡುವುದು ಬೇಡ. ಮುಸ್ಲೀಮರಿಗೆ ಪಕ್ಷ ಸಾಕಷ್ಟು ನೀಡಿದೆ ಎಂದರು ಅವರು.