ಬೆಂಗಳೂರು: “ಯಾವುದೇ ಕಾರಣಕ್ಕೂ JD(S)–NDA ಮೈತ್ರಿ ಕಡಿದುಕೊಳ್ಳುವುದಿಲ್ಲ” ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಸ್ಪಷ್ಟವಾಗಿ ಘೋಷಿಸಿದ್ದಾರೆ.
ಜೆಡಿಎಸ್ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಕಾರ್ಯಕರ್ತರು ಮತ್ತು ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು,
“ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಬಲಿಷ್ಠ, ಸ್ಥಿರ ಸರ್ಕಾರ ಇದೆ; ಇದನ್ನು ನಮ್ಮ ಕಾರ್ಯಕರ್ತರು ಮರೆಯಬಾರದು,” ಎಂದರು.
ಇತಿಹಾಸವನ್ನು ಸ್ಮರಿಸಿದ ದೇವೇಗೌಡರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ನೇತೃತ್ವದಲ್ಲಿ ನಡೆದ ‘ಎರಡನೇ ಸ್ವಾತಂತ್ರ್ಯ ಹೋರಾಟ’ದ ದಿನಗಳಲ್ಲಿ ಜನತಾ ಪಕ್ಷ ಮತ್ತು ಬಿಜೆಪಿಯ ಮುಖಂಡರು ಒಂದಾಗಿ ಕೆಲಸ ಮಾಡಿದ್ದನ್ನು ನೆನಪಿಸಿದರು.
“ಇಂದೂ ರಾಷ್ಟ್ರ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಲೇಬೇಕು,” ಎಂದು ಗರಂ ಗುಲುಗಿದರು.
ದೇವೇಗೌಡರು ತಮ್ಮ ರಾಜಕೀಯ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಾ,
“ಉತ್ತರದಲ್ಲಿ JD(U), ದಕ್ಷಿಣದಲ್ಲಿ JD(S). ಅಲ್ಲಿ ನಿತೀಶ್ ಕುಮಾರ್, ಇಲ್ಲಿ ಕುಮಾರಸ್ವಾಮಿ,” ಎಂದು ಘೋಷಿಸಿದರು.
ನಿತೀಶ್ ಕುಮಾರ್ ಅವರ ರಾಜಕೀಯ ಅನುಭವವನ್ನು ಮೆಚ್ಚಿದ ದೇವೇಗೌಡರು,
“ಅವರು 30ಕ್ಕೂ ಹೆಚ್ಚು ವರ್ಷಗಳಿಂದ ರಾಜಕಾರಣದಲ್ಲಿ ಇದ್ದಾರೆ. ಹತ್ತು ಬಾರಿ ಪ್ರಮಾಣ ಪಡೆದಿದ್ದಾರೆ. ಸೂಕ್ಷ್ಮವಾಗಿ, ಸಮತೋಲನದಿಂದ ರಾಜಕಾರಣ ಮಾಡುತ್ತಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡಬೇಕು,” ಎಂದು ಹೇಳಿದರು.
