ಬೆಂಗಳೂರು:
10 ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ ಪ್ರಕರಣದ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬುಧವಾರ ವಿಧಾನಸಭೆ ಕಾರ್ಯದರ್ಶಿಗೆ ಜಂಟಿ ಅವಿಶ್ವಾಸ ನೋಟಿಸ್ ನೀಡಿದ್ದಾರೆ.
ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಿನ್ನೆ ಪ್ರತಿಪಕ್ಷಗಳ ಸಭೆ ವೇಳೆ ವಿಧಾನಸಭೆ ಸ್ವೀಕರ್ ಯು.ಟಿ ಖಾದರ್ ಭೇಟಿ ನೀಡಿದ್ದನ್ನು ವಿರೋಧಿಸಿ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
“ಕರ್ನಾಟಕ ವಿಧಾನಸಭೆಯ ಎಲ್ಲಾ ಸದಸ್ಯರಿಂದ ಚುನಾಯಿತರಾಗಿರುವ ಸ್ಪೀಕರ್ ಅವರು ಸದನದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಅವರನ್ನು ಸ್ಥಾನದಿಂದ ತೆಗೆದುಹಾಕಲು, ನಾವು ಕಾರ್ಯವಿಧಾನದ ನಿಯಮಗಳು ಮತ್ತು ನಿಯಮ 169 ರ ಪ್ರಕಾರ ಕರ್ನಾಟಕ ವಿಧಾನಸಭೆಯಲ್ಲಿ ವ್ಯವಹಾರ ನಡೆಸುವುದರ ವಿರುದ್ಧ ಪ್ರಸ್ತಾವನೆಯನ್ನು ಮಂಡಿಸಲು ಅವಕಾಶವನ್ನು ಕೋರುತ್ತೇವೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಐಎಎಸ್ ಅಧಿಕಾರಿಗಳ ದುರ್ಬಳಕೆ ಆರೋಪ ಮಾಡಿರುವ ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರತ್ತ ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದು ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಸದಸ್ಯರ ನಡೆಯನ್ನು ಸ್ಪೀಕರ್ ಸ್ಥಾನಕ್ಕೆ ಅಗೌರವ ಎಂದು ಪರಿಗಣಿಸಿರುವ ಸ್ಪೀಕರ್ ಯುಟಿ ಖಾದರ್ ಅವರು 10 ಸದಸ್ಯರನ್ನು ಹಾಲಿ ಅಧಿವೇಶನದಿಂದ ಅಮಾನತು ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವಿಪಕ್ಷಗಳು ಸ್ಪೀಕರ್ ವಿರುದ್ಧವೇ ಅವಿಶ್ವಾಸ ನೋಟಿಸ್ ನೀಡಿವೆ.
ವಿಧಾನಸಭೆಯಲ್ಲಿ ದಿನದ ಕಲಾಪ ಆರಂಭವಾದಾಗಿನಿಂದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರವು 30 ಐಎಎಸ್ ಅಧಿಕಾರಿಗಳನ್ನು ತನ್ನ ಮೈತ್ರಿಕೂಟದ ನಾಯಕರ ಸೇವೆಗೆ ನಿಯೋಜಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿವೆ. 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ವಿಪಕ್ಷಗಳ ಸಭೆ ನಡೆಸಲಾಗಿತ್ತು.