ಕೆ.ಆರ್.ಪೇಟೆ (ಮಂಡ್ಯ):
ಜಿಲ್ಲೆಯ ಯುವಕರು ದೇಶ ವಿದೇಶಗಳಲ್ಲಿ ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆಯೋ ಅಲ್ಲಿಗೆ ತೆರಳಿ ಅವನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯು ವ್ಯವಸಾಯ ಪ್ರಧಾನವಾದ ಜಿಲ್ಲೆಯಾಗಿದೆ. ಇಲ್ಲಿನ ಯುವಕರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಹೆಚ್ಚಾಗಿ ತಾವಿದ್ದಲ್ಲಿಯೇ ದುಡಿಮೆಯ ಮಾರ್ಗ ಕಂಡುಕೊಂಡು ಹುಟ್ಟಿ ಬೆಳೆದ ಊರಿನಲ್ಲೇ ಇರಲು ಬಯಸುತ್ತಾರೆ. ಆದರೆ ಇದಕ್ಕೆ ಬದಲಾಗಿ, ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆಯೋ ಅಲ್ಲಿಗೆ ಹೋಗಿ ಆದಾಯ ಗಳಿಸುವ ಜೊತೆಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು ಎಂದರು.
ಯುವಕ/ಯುವತಿಯರಿಗೆ ಕೌಶಲಗಳನ್ನು ಕಲಿಸುವುದಕ್ಕೆ ಹಾಗೂ ದುಡಿಯುವ ಜನಕ್ಕೆ ಜೀವನೋಪಾಯದ ಮಾರ್ಗಗಳನ್ನು ಹೆಚ್ಚಿಸಲು ಸರ್ಕಾರ ಹಲವು ಕಾರ್ಯಗಳನ್ನು ರೂಪಿಸುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶವೆನ್ನದೆ ಎಲ್ಲೆಡೆ ಸಮಾನ ಆರ್ಥಿಕ ಚಲನಶೀಲತೆಯನ್ನು ಉಂಟುಮಾಡಲು ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಂಡ್ಯ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ವತಿಯಿಂದ ಈ ಉದ್ಯೋಗಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಈ ಮೇಳವನ್ನು ಏರ್ಪಡಿಸುವಲ್ಲಿ ಆಸಕ್ತಿ ವಹಿಸಿದ ಸ್ಥಳೀಯ ಶಾಸಕರೂ ಆದ ಸಚಿವ ನಾರಾಯಣಗೌಡ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವರಾದ ಸ್ಥಳೀಯ ಶಾಸಕ ಡಾ.ಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮತ್ತಿತರರು ಇದ್ದರು.