- ಆದ್ಯತಾ ಗುಂಪಿನಲ್ಲಿ ಕಲಾವಿದರಿಗೂ ಲಸಿಕೆ
- ವೈಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿ ಹೇಳಿದ ಡಾ.ಅಶ್ವತ್ಥನಾರಾಯಣ
ಬೆಂಗಳೂರು:
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‌ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದರು.
ಈಚೆಗೆ ಪ್ರಕಟಿಸಲಾದ ಪ್ಯಾಕೇಜ್‌ನಲ್ಲಿ ಕಲಾವಿದರಿಗೆ 3,000 ಕೊಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಚಿತ್ರರಂಗದ ಪೋಷಕ ಕಲಾವಿದರೂ ಸೇರಿದ್ದಾರಾ ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಚಿತ್ರರಂಗದ ಕಲಾವಿದರಿಗೂ ಆ ಹಣ ಸಿಗುವ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕ್ರಮ ವಹಿಸುವ ಬಗ್ಗೆ ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಪೋಷಕ ಕಲಾವಿದರನ್ನು ಆದ್ಯತೆಯ ಗುಂಪು ಎಂದು ಪರಿಗಣಿಸಿ ಅವರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಕಲಾವಿದರ ಪಟ್ಟಿ ನೀಡುವಂತೆ ಕೇಳಲಾಗಿದೆ. ಇದಲ್ಲದೆ, ಈ ಫುಡ್ ಕಿಟ್ ಪಡೆಯುತ್ತಿರುವ ಎಲ್ಲ ಕಲಾವಿದರಿಗೆ ವೈಯಕ್ತಿಕವಾಗಿ ತಲಾ 1,000 ರೂ. ಚೆಕ್ ನೀಡುವುದಾಗಿ ಇದೇ ವೇಳೆ ಡಿಸಿಎಂ ಹೇಳಿದರು.
ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ. ಮೀಸೆ ಅಂಜನಪ್ಪ, ಉಮೇಶ್ ಹೆಗ್ಡೆ, ಡಿಂಗ್ರಿ ನಾಗರಾಜ್, ಸಿತಾರಾ ಹಾಗೂ ಟ್ರಸ್ಟ್‌ನ ಭರತ್ ಗೌಡ, ನಟರಾದ ಗಣೇಶ್ ರಾವ್ ಕೆಸರ್ಕಾರ್, ಕೆಂಪೇಗೌಡ ಫುಡ್ ಕಿಟ್ ವ್ಯವಸ್ಥೆ ಮಾಡಿದ್ದರು. ಡಿಸಿಎಂ ಅವರು ಸಾಂಕೇತಿಕವಾಗಿ 30 ಕಲಾವಿದರಿಗೆ ಕಿಟ್ ವಿತರಣೆ ಮಾಡಿದ್ದು, ಉಳಿದ 200 ಕಿಟ್‌ಗಳನ್ನು ಕಲಾವಿದರ ಮನೆಗೆ ತಲುಪಿಸಲಾಗುವುದು ಎಂದು ಭರತ್ ಗೌಡ ಮಾಹಿತಿ ನೀಡಿದರು.