ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‍ನ 2023ನೆ ಸಾಲಿನ ‘ಕನ್ನಡ ಕಾಯಕ ದತ್ತಿ’ ಪ್ರಶಸ್ತಿಗೆ ಕನ್ನಡ ಪರ ಹೋರಾಟ ಕ್ಷೇತ್ರದಿಂದ ಬೆಂಗಳೂರಿನ ಗೋಮೂರ್ತಿ ಯಾದವ್, ರಂಗಭೂಮಿ ಕ್ಷೇತ್ರದಿಂದ ತುಮಕೂರಿನ ಕೆ.ರೇವಣ್ಣ, ಸಾಹಿತ್ಯ ಕ್ಷೇತ್ರದಿಂದ ಚಿತ್ರದುರ್ಗದ ಡಾ.ಮೀರಸಾಬಹಳ್ಳಿ ಶಿವಣ್ಣ ಆಯ್ಕೆಯಾಗಿದ್ದಾರೆ.
2024ನೇ ಸಾಲಿಗೆ ಕನ್ನಡ ಪರ ಹೋರಾಟ ಕ್ಷೇತ್ರದಿಂದ ಚಿಕ್ಕ ಬಳ್ಳಾಪುರದ ಜಿ.ಬಾಲಾಜಿ, ರಂಗಭೂಮಿ ಕ್ಷೇತ್ರದಿಂದ ದಕ್ಷಿಣ ಕನ್ನಡದ ಕೃಷ್ಣಮೂರ್ತಿ ಕವತ್ತಾರ್ ಮತ್ತು ಸಾಹಿತ್ಯ ಕ್ಷೇತ್ರದಿಂದ ವಿಜಯಪುರದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾಗಿದ್ದ ವ.ಚ.ಚನ್ನೇಗೌಡ ಅವರು ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಸ್ಥಾಪಿಸಿದ್ದು ನಾಡು-ನುಡಿ, ನೆಲ-ಜಲ ಕುರಿತು ಸೇವೆ ಸಲ್ಲಿಸಿದವರಿಗೆ, ಕನ್ನಡಪರ ಹೋರಾಟಗಾರರಿಗೆ ಮತ್ತು ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ 3 ಜನರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.