ಬೆಂಗಳೂರು / ಟೊರೊಂಟೊ: ಕೆನಡಾದ ಟೊರೊಂಟೊ ಪೊಲೀಸ್ ಸೇವೆ (Toronto Police Service), ಬಂಗ್ಳೂರು ಮೂಲದ ಕನ್ನಡಿಗ ಚಂದನ್ ಕುಮಾರ್ ರಾಜಾ ನಂದಕುಮಾರ್ (37) ಅವರ ಸಾವನ್ನು ಹತ್ಯೆ ಪ್ರಕರಣ ಎಂದು ಅಧಿಕೃತವಾಗಿ ದೃಢಪಡಿಸಿದೆ.
ಟೊರೊಂಟೊ ಪೊಲೀಸ್ ಪ್ರಕಟಣೆಯ ಪ್ರಕಾರ, ಫೆಬ್ರವರಿ 7, 2026ರ ಶನಿವಾರ ಮಧ್ಯಾಹ್ನ ಸುಮಾರು 3:31ರ ವೇಳೆಗೆ, ರೆಕ್ಸ್ಡೇಲ್ ಬೌಲಿವರ್ಡ್ ಮತ್ತು ಹೈವೇ 27 ಸಮೀಪದ ವುಡ್ಬೈನ್ ಶಾಪಿಂಗ್ ಸೆಂಟರ್ ಪಾರ್ಕಿಂಗ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
“ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಡೇಟಿನಿಂದ ಗಾಯಗೊಂಡ ವ್ಯಕ್ತಿಯನ್ನು ಪತ್ತೆಹಚ್ಚಿದರು.
ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರು ಗಾಯಗಳಿಗೆ ಬಲಿಯಾದರು,”
— ಟೊರೊಂಟೊ ಪೊಲೀಸ್ ಸೇವೆ, ಹೋಮಿಸೈಡ್ ಅಂಡ್ ಮಿಸ್ಸಿಂಗ್ ಪರ್ಸನ್ಸ್ ಯೂನಿಟ್
ಪೊಲೀಸರು ಮೃತ ವ್ಯಕ್ತಿಯನ್ನು ಬ್ರಾಂಪ್ಟನ್ ನಿವಾಸಿ ಚಂದನ್ ಕುಮಾರ್ ರಾಜಾ ನಂದಕುಮಾರ್ (37) ಎಂದು ಗುರುತಿಸಿದ್ದಾರೆ. ಈ ಪ್ರಕರಣವು 2026ರ ಟೊರೊಂಟೊ ನಗರದ ಮೂರನೇ ಹತ್ಯೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಗ್ಳೂರು ಸಮೀಪದ ನೆಲಮಂಗಲ ಪ್ರದೇಶದ ಮೂಲದವರಾದ ಚಂದನ್ ಕುಮಾರ್, ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದರು. ಅವರು ಕನ್ನಡ ಮತ್ತು ಭಾರತೀಯ ಸಮುದಾಯದಲ್ಲಿ ಸಕ್ರಿಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಹೊಸದಾಗಿ ವಿದೇಶಕ್ಕೆ ಬಂದವರಿಗೆ ಉದ್ಯೋಗ, ವಸತಿ ಹಾಗೂ ಸಮುದಾಯ ಸಹಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕುಟುಂಬ ಹಾಗೂ ಸ್ನೇಹಿತರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕುಟುಂಬಕ್ಕೆ ತಡರಾತ್ರಿ ಮಾಹಿತಿ ಲಭಿಸಿದ್ದು, ನಂತರ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಕರಣದ ವಿವರಗಳನ್ನು ತಿಳಿದುಕೊಳ್ಳಲಾಗಿದೆ. ಚಂದನ್ ಕುಮಾರ್ ಅವರ ಮೃತದೇಹವನ್ನು ಭಾರತಕ್ಕೆ ತರಿಸುವ ಕುರಿತು ವಿದೇಶಾಂಗ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಸಹಾಯವನ್ನು ಕುಟುಂಬ ಮನವಿ ಮಾಡಿದೆ.
ಟೊರೊಂಟೊ ಪೊಲೀಸ್ ಇಲಾಖೆ ತನಿಖೆಯನ್ನು ಹೋಮಿಸೈಡ್ ಅಂಡ್ ಮಿಸ್ಸಿಂಗ್ ಪರ್ಸನ್ಸ್ ಯೂನಿಟ್ ಮೂಲಕ ನಡೆಸುತ್ತಿದ್ದು, ಸಾರ್ವಜನಿಕರಿಂದ ಮಾಹಿತಿ ಕೋರಿದೆ.
“ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಇರುವವರು 416-808-7400 ಸಂಖ್ಯೆಗೆ ಅಥವಾ ಕ್ರೈಂ ಸ್ಟಾಪರ್ಸ್ಗೆ ಅನಾಮಧೇಯವಾಗಿ 416-222-TIPS (8477) ಮೂಲಕ ಸಂಪರ್ಕಿಸಬಹುದು,”
— ಟೊರೊಂಟೊ ಪೊಲೀಸ್ ಸೇವೆ
ಈ ಹಂತದಲ್ಲಿ ಆರೋಪಿಗಳು ಅಥವಾ ದಾಳಿಯ ಉದ್ದೇಶದ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.
ಈ ಘಟನೆ ಕೆನಡಾದಲ್ಲಿರುವ ಕನ್ನಡ ಹಾಗೂ ಭಾರತೀಯ ಸಮುದಾಯದಲ್ಲಿ ತೀವ್ರ ಆತಂಕ ಉಂಟುಮಾಡಿದ್ದು, ವಿದೇಶಗಳಲ್ಲಿ ಭಾರತೀಯರ ಸುರಕ್ಷತೆ ಕುರಿತ ಚರ್ಚೆಗೆ ಕಾರಣವಾಗಿದೆ.
