ಬೆಂಗಳೂರು:
ಇಂಡೋನೆಷ್ಯಾ ಜಕಾರ್ತಾ ದಲ್ಲಿ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊಹಮದ್ ತಾಹೀರ್ ಎಂಬ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ 50 ಸಾವಿರ ರೂ. ಬಹುಮಾನ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಪದಕ ಗೆದ್ದ ಮೊಹಮದ್ ತಾಹೀರ್ ಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಕಳೆದ ತಿಂಗಳು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರೊಂದಿಗೆ ಬಂದಿದ್ದ ತಾಹೀರ್, ನಾನು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆ ಯಾಗಿದ್ದು ಪಾಲ್ಗೊಳ್ಳಲು ಆರ್ಥಿಕ ಸಂಕಷ್ಟ ಎದುರಾಗಿದೆ. ನಮ್ಮ ತಂದೆ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು ಅಷ್ಟು ಹಣ ಹೊಂದಿಸಲು ಆಗುತ್ತಿಲ್ಲ ಎಂದು ಹೇಳಿದ್ದ. ಆಗ ಈ ವಿದ್ಯಾರ್ಥಿಗೆ ಸಚಿವರು 65 ಸಾವಿರ ರೂ. ವಿಮಾನಯಾನ ಟಿಕೆಟ್ ಮಾಡಿಸಿಕೊಟ್ಟಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಬ್ಬಾಳದ ಕ್ರೆಸೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಹೀರ್ ಚಿನ್ನದ ಪದಕ ಗೆದ್ದು ಬಂದಿದ್ದಾನೆ.
ಇಂದು ಸಚಿವರ ಬಳಿ ಬಂದಿದ್ದ ತಾಹೀರ್ ಪೋಷಕರು,
ನೀವು ಸಹಾಯ ಮಾಡಿದ್ದಕ್ಕೆ ನಮ್ಮ ಮಗ ಸ್ಪರ್ಧೆಯಲ್ಲಿ ಭಾಗಿಯಾಗಿ ಬಂಗಾರ ಪದಕ ಗೆಲ್ಲುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.
50 ಸಾವಿರ ನಗದು ಬಹುಮಾನ ನೀಡಿದ ಸಚಿವರು, ನಿಮ್ಮ ಮಗನ ಸಾಧನೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಚೇತನರ ಪರ ಕೆಲಸ ಮಾಡುವ 12:3 ಗ್ಲೋಬಲ್ ಆರ್ಗನೈಜೇಶನ್ ಸಂಸ್ಥೆ ಗೆ ಸಚಿವರು ವೈಯಕ್ತಿಕವಾಗಿ ಎರಡು ಲಕ್ಷ ರೂ. ನೆರವು ನೀಡಿದರು.
ಕೆಪಿಸಿಸಿಯಲ್ಲಿ ಗುರುವಾರ ಬೆಳಗ್ಗೆ 10.30
ಪ್ಲೀಸ್ ರಿಂದ 1.30 ರವರೆಗೆ ನೂರಾರು ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವರು ಅಹವಾಲು ಸ್ವೀಕಾರ ಮಾಡಿದರು.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಆರೋಗ್ಯ ಮತ್ತು ಶಿಕ್ಷಣಕ್ಕೆ ಸಹಾಯ ಕೋರಿದವರಿಗೆ ವೈಯಕ್ತಿಕ ವಾಗಿ ಆರ್ಥಿಕ ನೆರವು ನೀಡಿದರು.
ಮಾಜಿ ಸಂಸದ ಚಂದ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ, ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶೇಖರ್, ಮುಖಂಡರಾದ ಜಿ. ಎ. ಬಾವಾ ಮತ್ತಿತರರು ಉಪಸ್ಥಿತರಿದ್ದರು.