Home ಬೆಂಗಳೂರು ನಗರ ವರ್ಗಾವಣೆ ದಂಧೆಯಲ್ಲಿ ₹1000 ಕೋಟಿ ವ್ಯವಹಾರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ

ವರ್ಗಾವಣೆ ದಂಧೆಯಲ್ಲಿ ₹1000 ಕೋಟಿ ವ್ಯವಹಾರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ

12
0
Karnataka: ₹1000 crore transaction in transfer racket: Ex-CM HD Kumaraswamy
Karnataka: ₹1000 crore transaction in transfer racket: Ex-CM HD Kumaraswamy

ಕೇರಳ ಘಟನೆ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿ

ಬೆಂಗಳೂರು:

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ವ್ಯವಹಾರದಲ್ಲಿ 1000 ಕೋಟಿ ರೂಪಾಯಿಗೂ ಮೀರಿ ಬಿಸ್ನೆಸ್ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿಯಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆಯ ಬಗ್ಗೆ ಸಿದ್ದರಾಮಯ್ಯ ಅವರ ಸರಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ಈ ಸರಕಾರ ಲೆಕ್ಕಕ್ಕೆ ಇಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ದಿನದಿಂದ ದಿನಕ್ಕೆ ಅದರ ಅವ್ಯವಹಾರ ಮೇರೆ ಮೀರುತ್ತದೆ. ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ದಂಧೆಯಲ್ಲಿ 1000 ಕೋಟಿಗೂ ಮೀರಿ ಕೈ ಬದಲಾಗಿದೆ ಎಂದು ಅಧಿಕಾರಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ಈ ಸರಕಾರ ಪ್ರತಿಯೊಂದು ಹುದ್ದೆಯನ್ನು ಮಾರಿಕೊಳ್ಳುತ್ತಿದೆ. ಪ್ರತಿ ಹುದ್ದೆಗೂ ಹಣ ಪಡೆದು ವರ್ಗಾವಣೆ ಮಾಡುತ್ತಿದೆ. ನಾನು ಹೇಳಿರುವಂತೆ ವೈ ಟಿ ಟ್ಯಾಕ್ಸ್ ನ ವೈಎಸ್ ಅಂದರೆ ಏನು ಎಂದು ಪತ್ತೆ ಮಾಡಿದರೆ, ಆ ಬಗ್ಗೆ ತನಿಖೆ ಮಾಡಿದರೆ ಈ ಸರಕಾರದ ಬುಡ ಅಲ್ಲಾಡುತ್ತದೆ ಎಂದರು ಅವರು.

ಒಂದೊಂದು ಫೋಸ್ಟ್ ಗೆ ಮೂರು ಮೂರು ಅಧಿಕಾರಿಗಳ‌ ನಿಯೋಜನೆ ಆಗಿದ್ದಾರೆ. ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಯ ಅಡಿ ಟಿಪ್ಪಣಿಗಳು ಹಾದಿಬೀದಿಯಲ್ಲಿ ಬಿಕರಿ ಆಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ಮಂತ್ರಿಗೆ ಜೀವನ ಕಳೆಯುವಷ್ಟು ಹಣ ಇದೆ. ಐದಾರು ಜನ್ನಕ್ಕೆ ಆಗುವಷ್ಟು ಸಂಪತ್ತು ಇದೆ. ಆದರೆ ಆ ಸಚಿವ ಸಣ್ಣಸಣ್ಣ ಪೋಸ್ಟಿಗೂ 10 ರಿಂದ 15 ಲಕ್ಷ ಹಣ ಕೇಳ್ತಾ ಇದ್ದಾನೆ. ಇದಕ್ಕಿಂತ ಹೇಸಿಗೆಯ ವಿಷಯ ಬೇರೆ ಇದೆಯಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಡಾ.ಜಿ.ಪರಮೇಶ್ವರ್ ಅವರಿಗೆ ತಿರುಗೇಟು:

ವರ್ಗಾವಣೆ ಬಗ್ಗೆ ಮಾತಾಡೋಕೆ ಅಸಹ್ಯ ಆಗುತ್ತದೆ. ಇಡೀ ದೇಶದಲ್ಲಿ ಕರ್ನಾಟಕದ ಮಾನ ಮರ್ಯಾದೆ ಬೀದಿ ಬೀದಿಯಲ್ಲಿ ಹರಾಜಾಗುತ್ತಿದೆ ಎಂದ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ತಮ್ಮ ನೇತೃತ್ವದ ಮೈತ್ರಿ ಸರಕಾರದಲ್ಲಿ ಗೃಹ ಸಚಿವರೂ ಆಗಿದ್ದ ಪರಮೇಶ್ವರ್ ಅವರಿಗೆ ನಾನು ವರ್ಗಾವಣೆ ವಿಷಯದಲ್ಲಿ ಸಲಹೆ ಕೊಟ್ಟಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ನಾನು ಏನು ಸಲಹೆ ಕೊಟ್ಟಿದ್ದೀನಿ ಎಂದು ಅವರು ಜನರ ಮುಂದೆ ಬಂದು ಹೇಳಲಿ. ಪೊಲೀಸ್ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪ ಇತ್ತಾ? ನೀವು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೇರಿ ವರ್ಗ ಮಾಡಿದ್ದು, ಅಲ್ಲವೇ? ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಯಿತಾ? ಅಲ್ಲಿ ನಡೆದ ಅವಾಂತರಕ್ಕೆ ಯಾರು ಕಾರಣ? ಪರಮೇಶ್ವರ್ ಹೇಳಬಹುದು, ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ನುಡಿದರು.

ಗೃಹ ಸಚಿವರು ನನ್ನ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಕೇರಳದಲ್ಲಿ ನಿಮ್ಮ ಇಲಾಖೆಯ ಮಾನ ಮೂರಾಬಟ್ಟೆ ಆಗಿದೆ. ಕೇರಳಕ್ಕೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸ್ಕೊಂಡು ಬಂದ್ರಲ್ಲಾ? ಯಾವ ರೀತಿ ಆಡಳಿತ ಇದೆ ಎನ್ನುವುದಕ್ಕೆ ಈ ಉದಾಹರಣೆ ಸಾಕಲ್ಲವೇ? ಎಂದು ಪರಮೇಶ್ವರ್ ಅವರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎ.ಶರವಣ, ಮಾಜಿ ಸದಸ್ಯರಾದ ಶ್ರೀ ಚೌಡರೆಡ್ಡಿ ತೂಪಲ್ಲಿ, ಪಕ್ಷದ ನಗರ ಘಟಕದ ಅಧ್ಯಕ್ಷರಾದ ಶ್ರೀ ಹೆಚ್.ಎಂ.ರಮೇಶ್ ಗೌಡ ಈ ಸಂದರ್ಭದಲ್ಲಿ ನನ್ನ ಜತೆಯಲ್ಲಿ ಇದ್ದರು.

LEAVE A REPLY

Please enter your comment!
Please enter your name here