• ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿಗಳ ಕಾರ್ಯಪಡೆ
• ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ 16,205 ಪ್ರಕರಣಗಳು ಇತ್ಯರ್ಥ
• 75 ಜನ ಒತ್ತುವರಿದಾರರಿಗೆ ಒಂದು ವರ್ಷ ಶಿಕ್ಷೆ ಹಾಗೂ ದಂಡ
ಬೆಳಗಾವಿ:
ರಾಜ್ಯಾದ್ಯಾಂತ 2,73,778 ಎಕರೆ/ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದ್ದು, ರಾಜ್ಯಾದ್ಯಂತ ಒತ್ತುವರಿ ತೆರವು ಕಾರ್ಯಚರಣೆ ಪ್ರಗತಿಯಲ್ಲಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಅವರು ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಡಾ| ವೈ.ಎ. ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ರಾಜ್ಯಾದ್ಯಂತ ಒಟ್ಟು 63,32,486 ಎಕರೆ/ಗುಂಟೆ ಸರ್ಕಾರಿ ಜಮೀನಿದ್ದು, ಇದರಲ್ಲಿ 14,72,493 ಎಕರೆ/ಗುಂಟೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ವಿವಿಧ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಅಕ್ರಮ ಸಕ್ರಮ ಯೋಜನೆ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವ ಒಟ್ಟು 10,82,752 ಎಕರೆ/ಗುಂಟೆ ಜಮೀನು ಹೊರತುಪಡಿಸಿ, ಉಳಿದಂತೆ 3,89,741 ಎಕರೆ/ಗುಂಟೆ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಬೇಕಾಗಿದ್ದು, ಇದರಲ್ಲಿ 2,73,778 ಎಕರೆ/ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿಯಿದ ತೆರವುಗೊಳಿಸಲಾಗಿದೆ. ಉಳಿದಂತೆ 1,15,963 ಎಕರೆ/ಗುಂಟೆ ಜಮೀನನ್ನು ಒತ್ತುವರಿ ತೆರವುಗೊಳಿಸಲು ಬಾಕಿ ಇದೆ ಎಂದು ತಿಳಿಸಿದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಅಕ್ಟೋಬರ್-2023ರ ಅಂತ್ಯಕ್ಕೆ ಒಟ್ಟು 21,712 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 16,205 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 5,507 ಪ್ರಕರಣಗಳು ಬಾಕಿ ಇದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ಈವರೆಗೂ 75 ಜನರಿಗೆ ಒಂದು ವರ್ಷದಂತೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಯ ಪಡೆಗಳನ್ನು ರಚಿಸಲಾಗಿದೆ. ಅದರಂತೆ ಎಲ್ಲಾ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು, ಒತ್ತುವರಿ ಆಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಖಾಸಗಿಯವರಿಂದ ಒಟ್ಟು 23,307 ಪ್ರಕರಣಗಳಲ್ಲಿ 51,555-31.01 ಎಕರೆ/ಗುಂಟೆ ಜಮೀನು ಅತಿಕ್ರಮಣಗೊಂಡಿದ್ದು, 12,434 ಪ್ರಕರಣಗಳಲ್ಲಿ 28,264-19.05 ಎಕರೆ/ಗುಂಟೆ ಜಮೀನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ.
ಸರ್ಕಾರಿ ಜಮೀನು ಒತ್ತುವರಿ ಮಾಡುವವರಿಗೆ ಸಹಾಯ ಮಾಡುವ ಅಧಿಕಾರಿಗಳ ವಿರುದ್ದ ಎಫ್.ಐ.ಆರ್ ದಾಖಲು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.