ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಸುದ್ದಿ ಪ್ರಕಟಿಸಿದ್ದಕ್ಕಾಗಿ ಕೆಪಿಸಿಸಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 499 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಾಘಟ್ಟ ಅವರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ಸಮನ್ಸ್ ಜಾರಿ ಮಾಡುವಂತೆ, ಸಮನ್ಸ್ ಜಾರಿಯಾದ ನಂತರ 28.03.2024 ಕ್ಕೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದೆ. ಬಿಜೆಪಿಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಕೇಶವಪ್ರಸಾದ್ ಅವರು ಪ್ರತಿನಿಧಿಸಿದ್ದರು. ವಕೀಲರಾದ ವಿನೋದ್ ಕುಮಾರ್ ಮತ್ತು ಯೋಗೇಂದ್ರ ಹೊಡಾಘಟ್ಟ ಅವರು ಈ ಕುರಿತು ದೂರು ನೀಡಿದ್ದರು.
ರಾಜ್ಯ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಕೆಪಿಸಿಸಿಯು ಬಿಜೆಪಿಯ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿತ್ತು, ಇದರ ವಿರುದ್ಧ ಬಿಜೆಪಿ ಕಾನೂನು ಪ್ರಕೋಷ್ಠವು ಚುನಾವಣಾಧಿಕಾರಿಗಳಿಗೆ ದೂರು ನೀಡಿತ್ತು ಅಲ್ಲದೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಇಂದು ನ್ಯಾಯಾಲಯವು ಈ ಆದೇಶ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.