ಬೆಂಗಳೂರು:
ರಾಜ್ಯದಲ್ಲಿ ಈ ವರ್ಷ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪವನ್ನು ಸರ್ಕಾರ ಮಾಡಿದ್ದು, ಅರಣ್ಯ ಇಲಾಖೆಯ ವೃಕ್ಷಾಂದೋಲನದಲ್ಲಿ ಕೈಜೋಡಿಸುವಂತೆ ತಿಳಿಸಿ, 10 ಲಕ್ಷ ಸಸಿಗಳನ್ನು ಉಚಿತವಾಗಿ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.
ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ನೇತೃತ್ವದ ನಿಯೋಗ ಭೇಟಿ ಮಾಡಿ ರಾಜ್ಯದಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 10 ಲಕ್ಷ ಸಸಿ ನೆಡಲು ನೆರವು ಕೋರಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಡೇರೆ ನಿರ್ಮಿಸಿ ಮಕ್ಕಳು ಅರಣ್ಯದಲ್ಲೇ ಉಳಿದು ಪ್ರಾಣಿ, ಪಕ್ಷಿ ಮತ್ತು ಅರಣ್ಯದ ಬಗ್ಗೆ ಅರಿಯಲು ಅನುವಾಗುವ ಚಿಣ್ಣರ ವನ ದರ್ಶನ ಕಾರ್ಯಕ್ರಮದ ಅಡಿಯಲ್ಲಿ ಸ್ಕೌಟ್ಸ್ ಮತ್ತು ಗ್ರೈಡ್ಸ್ ಗೆ ಆದ್ಯತೆ ನೀಡಬೇಕು ಎಂಬ ಮನವಿಯನ್ನೂ ಪುರಸ್ಕರಿಸಲಾಗುವದು.
ಕಾಡ್ಗಿಚ್ಚು ಕಾಣಿಸಿಕೊಂಡಾಗ ಸ್ಕೌಟ್ಸ್ ವಿದ್ಯಾರ್ಥಿಗಳು ಪ್ರಕೃತಿ ಯೋಧರಾಗಿ ಅರಣ್ಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಬೆಂಕಿ ನಂದಿಸಲು ನೆರವು ನೀಡುತ್ತಿರುವುದು ಸಂತಸ ತಂದಿದೆ.
ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಳಕ್ಕೆ ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ., ಎನ್.ಎಸ್.ಎಸ್., ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಸ್ವ ಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತರು, ವಿವಿಧ ಕಾರ್ಮಿಕ ಸಂಘಟನೆಗಳು ಎಲ್ಲರೂ ಒಟ್ಟಿಗೆ ಕೈಜೋಡಿಸಬೇಕು.