ಕೊಲ್ಲಾಪುರ/ಬೆಂಗಳೂರು:
ಮಹಾರಾಷ್ಟ್ರದ ಕೋಲಾಪುರ ದಲ್ಲಿರುವ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿ ಮಠದ ಗೋಶಾಲೆ ಹಾಗೂ ಕೃಷಿ ವಿಜ್ಞಾನ ಕೇಂದ್ರಕ್ಕೆ ಪ್ರಭು ಚೌಹಾಣ್ ಇಂದು ಭೇಟಿ ನೀಡಿ ಕಾಡಸಿದ್ದೇಶ್ವರ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು.
ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದ ಸಚಿವರು ಗವ್ಯ ಉತ್ಪನ್ನಗಳ ತಾಯಾರಿಕೆಗೆ ಹಾಗೂ ಪಾರಂಪರಿಕ ಕೃಷಿ ಪದ್ದತಿ ಅಳವಡಿಸಿಕೊಂಡು ರೈತರಿಗೆ ಕೃಷಿ ತರಬೇತಿ ನೀಡುತ್ತಿರುವುದನ್ನು ಕಂಡು ಸಚಿವರು ಹರ್ಷ ವ್ಯಕ್ತಪಡಿಸಿದರು ಅಲ್ಲದೆ ಈ ತರಹದ ತರಬೇತಿಗಳನ್ನು ರಾಜ್ಯದಲ್ಲಿ ಅಳವಡಿಕೊಳ್ಳಲು ನಾವು ಸಹ ಕ್ರಮವಹಿಸುತ್ತೇವೆ ಕಾಡಸಿದ್ದೇಶ್ವರ ಸ್ವಾಮಿಜಿಗಳಿಗೆ ಸಚಿವರು ಹೇಳಿದರು.
ರೈತರಿಗೆ ಹಾಗೂ ಗೋಶಾಲೆಗಳಿಗೆ ಗವ್ಯ ಉತ್ಪನ್ನಗಳ ತಯಾರಿಕೆಯ ತರಬೇತಿ ನೀಡಿ ಅವರನ್ನು ಸ್ವಾವಲಂಬಿಯಾಗಿಸಲು ವಿಶೇಷವಾದ ತರಬೇತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಭು ಚೌಹಾಣ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಗವ್ಯ ಉತ್ಪನ್ನಗಳ ತಯಾರಿಕೆ ಹಾಗೂ ಕೃಷಿಯಲ್ಲಿ ಗೋವುಗಳ ಪಾತ್ರದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿಯನ್ನು ಹಮ್ಮಿಕೊಂಡಿದ್ದೆಯಾದಲ್ಲಿ ರಾಜ್ಯದ ಎಲ್ಲ ಗೋಶಾಲೆಗಳು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತವೆ ಇದರಿಂದ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವವರ ಮನ ಪರಿವರ್ತನೆ ಆಗುತ್ತದೆ. ಬದುಕಿದ್ದಾಗ ಗೋವು ಆರ್ಥಿಕವಾಗಿ ಎಷ್ಟು ಲಾಭವನ್ನು ನೀಡುತ್ತದೆಯೋ ಸತ್ತ ನಂತರವೂ ಅಷ್ಟೇ ಉಪಕಾರಿಯಾಗಿ ಕೃಷಿಯ ಭೂಮಿಯ ಆರೋಗ್ಯವನ್ನು ಗೋನಂದಾಜಲದ ಮೂಲಕ ಕಾಪಾಡುತ್ತದೆ ಎಂದು ಅವರು ಹೇಳಿದರು.
ಈ ತರದ ಕೆಲವು ನಿದರ್ಶನಗಳನ್ನು ಇಟ್ಟುಕೊಂಡು ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಲು ವಿಶೇಷ ಕಾರ್ಯಕ್ರಮ ರೂಪಿಸುವ ಆಲೋಚನೆ ಇದ್ದು ಶೀಘ್ರದಲ್ಲಿಯೇ ಇಲಾಖೆಯ ಅಧಿಕಾರಿಗಳು ಹಾಗೂ ಗವ್ಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಕೆಲವು ವಿಶೇಷ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವುದಾಗಿ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ
ವಿವಿಧ ರಾಜ್ಯಗಳ 22ಕ್ಕೂ ಹೆಚ್ಚು ವಿಶೇಷವಾದ ಗೋತಳಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. 1000ಕ್ಕೂ ಹೆಚ್ಚು ಗೋವುಗಳನ್ನು ಮಠದಲ್ಲಿ ಸಾಕಲಾಗಿದೆ. ಮಾನವ ಹಾಗೂ ಗೋವುಗಳ ಸಂಬಂಧ ಅತ್ಯಂತ ಪುರಾತನವಾದದ್ದು. ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಗೋವುಗಳು ಮಹತ್ವದ ಪಾತ್ರವಹಿಸುತ್ತವೆ ಎಂಬುದು ಮಠದ ನಂಬಿಕೆ.
ಗವ್ಯ ಉತ್ಪನ್ನಗಳಿಂದ ಚಿಕಿತ್ಸೆ
ಸುಮಾರು ಐವತ್ತಕ್ಕೂ ಹೆಚ್ಚು ಗವ್ಯ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು ಹೃದಯರೋಗ, ಕಿಡ್ನಿ ಸಮಸ್ಯೆ, ಡಯಾಬಿಟಿಸ್, ಉದರ ಸಂಬಂಧಿ ಕಾಯಿಲೆಗಳಿಗೆ ಗೌವ್ಯ ಉತ್ಪನ್ನಗಳಿಂದ ಚಿಕಿತ್ಸೆ ನೀಡುತ್ತಿರುವುದು ವಿಶೇಷ ಎಂದು ಸಚಿವರು ತಿಳಿಸಿದ್ದಾರೆ..
ರಾಸಾಯನಿಕ ರಹಿತ ಕೃಷಿಗೆ ಹೆಚ್ಚು ಒತ್ತು ನೀಡಿ ಕೃಷಿ ಭೂಮಿಯ ಆರೋಗ್ಯ ಕಾಪಾಡಿಕೊಳ್ಳುವುದು ಇಂದು ನಮ್ಮ ಮುಂದಿರುವ ದೊಡ್ಡ ಸವಾಲು. ನಿರಂತರ ರಾಸಾಯನಿಕ ಬಳಕೆಯಿಂದ ಭೂಮಿಯ ಆರೋಗ್ಯವು ಕೆಡುವುದಲ್ಲದೆ ಇದರ ಪರಿಣಾಮ ಮನುಷ್ಯನ ಆರೋಗ್ಯದ ಮೇಲೂ ಆಗುತ್ತದೆ. ಇದನ್ನು ತಪ್ಪಿಸಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಪಾರಂಪರಿಕ ಆಧಾರಿತ ಕೃಷಿ ಮಾಡುವುದಕ್ಕೆ ಮಠ ಸಾಕಷ್ಟು ಶ್ರಮವಹಿಸುತ್ತಿದೆ ಎಂದು ಆವರು ನುಡಿದರು.
ಗೋನಂದಾಜಲ ಬಳಕೆ
ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಕಾಂಪೋಸ್ಟ್ ಗೊಬ್ಬರ ವರ್ಮಿಕಾಂಪೋಸ್ಟ್, ಜೀವಾಮೃತ, ಗೋನಂದಾಜಲ ಇವುಗಳ ಬಳಕೆ ಹಾಗೂ ಇಳುವರಿ ಹೆಚ್ಚು ಪಡೆದುಕೊಳ್ಳಲು ಅತ್ಯಂತ ಸಕ್ರಿಯವಾಗಿ ರೈತರಿಗೆ ತರಬೇತಿ ನೀಡುತ್ತಿದೆ ಸಚಿವರು ಹೇಳಿದರು
ಸಗಣಿಯಿಂದ ಪೇಂಟ್ ತಯಾರಿಕೆ
ಸಗಣಿ ಉಪಯೋಗ ಮಾಡಿಕೊಂಡು ಇಲ್ಲಿ ಪೇಂಟ್ ಹಾಗೂ ವಾಲ್ ಪುಟ್ಟಿ ತಯಾರಿ ಮಾಡಲಾಗುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಪ್ರಾತ್ಯಕ್ಷಿಕೆಯನ್ನು ಇಲ್ಲಿ ನೀಡುತ್ತಾರೆ. ರೈತರು ಹಾಗೂ ಗೋಶಾಲೆಗಳು ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಳ್ಳಲು ಈ ತರಹದ ವಿಭಿನ್ನ ಪ್ರಯತ್ನಗಳು ಸಹಕಾರಿ ಆಗುತ್ತವೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.