ಬೆಂಗಳೂರು:
ಸಕಾಲ ಅಧಿಸೂಚಿತ ಸೇವೆಗಳ ಅಡಿಯಲ್ಲಿ ಸಲ್ಲಿಸುವ ಅರ್ಜಿಗಳು ತಿರಸ್ಕೃತಗೊಂಡಿದ್ದರೆ ಅಂತಹವರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಪ್ರಥಮ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಲಿಂಕ್ ಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಸಕಾಲ ಮಿಷನ್ ರಾಜ್ಯದಲ್ಲಿ ಜಾರಿಗೆ ತಂದಿದೆ.
ಅರ್ಜಿ ತಿರಸ್ಕೃತಗೊಂಡಿದ್ದಲ್ಲಿ ಅರ್ಜಿದಾರರು ಸಕ್ಷಮ ಪ್ರಾಧಿಕಾರಿಗೆ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಲು ಸಕಾಲ ಮಿಷನ್ ಅವಕಾಶ ಕಲ್ಪಿಸಿದೆ. ನಾಗರೀಕರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಹಾಗೂ ಸುಲಭವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಅಪೀಲು ಹಾಕಲು ಲಿಂಕ್‌ನ್ನು ಎಸ್‌ಎಂಎಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಕಾಲ ಮಿಷನ್ನ ಹೆಚ್ಚುವರಿ ಯೋಜನಾ ನಿರ್ದೇಶಕಿ ಶ್ರೀಮತಿ ಪಲ್ಲವಿ ಆಕುರಾತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿರಸ್ಕೃತಗೊಂಡ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ವಯಂಚಾಲಿತವಾಗಿ ಎಸ್‌ಎಂಎಸ್ ಕಳುಹಿಸುವ ಸೇವೆಯನ್ನು ಸೆಪ್ಟೆಂಬರ್ ತಿಂಗಳಿನಿಂದ ಚಾಲನೆಗೊಳಿಸಿದೆ. ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯದಿಂದ ಇದುವರೆಗೆ ಒಟ್ಟು 3,18,420 ಎಸ್‌ಎಂಎಸ್‌ಗಳನ್ನು ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಅರ್ಜಿಗಳ ಮಾಹಿತಿಯನ್ನು ಸಕಾಲ ತಂತ್ರಾಂಶಕ್ಕೆ ಮ್ಯಾನ್ಯುಯಲ್ ಆಗಿ ಪುಶ್ ಮಾಡುತ್ತಿದ್ದು, ಇದನ್ನು ಅಟೋಪುಷ್‌ಗೆ ಬದಲಾಯಿಸಲಾಗಿದೆ. ಇದರಿಂದ, ಸಕಾಲದಲ್ಲಿ ಬಾಕಿ ಇದ್ದ ಅರ್ಜಿಗಳ ಸಂಖ್ಯೆಯು ಗಣನೀಯವಾಗಿ ಇಳಿಕೆಗೊಂಡು 9691 ರಿಂದ 2682 ಗಳಿಗೆ ಇಳಿಕೆಯಾಗಿದೆ ಎಂದು ಪಲ್ಲವಿ ಅವರು ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿರುವ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆಯನ್ನು ಗಮನಿಸಿ ಸಕಾಲ ಮಿಷನ್ ಹೊಸ ಹೊಸ ಸೇವೆಗಳನ್ನು ಸೇರ್ಪಡೆಗೊಳಿಸುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಸ್ತಿತ್ವದಲ್ಲಿರುವ ದೂರ ಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ ನಿಯಮಿತಗೊಳಿಸುವಿಕೆ ಮತ್ತು ಹೊಸ/ ಅಸ್ತಿತ್ವದಲ್ಲಿರುವ ಓವರ್‌ಗ್ರೌಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ/ನಿಯಮಿತಗೊಳಿಸುವಿಕೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅಲ್ಪ ಸಂಖ್ಯಾತರ ಇಲಾಖೆಯಿಂದ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ ಯೋಜನೆ, ಎಂಫಿಲ್ ಮತ್ತು ಪಿಹೆಚ್‌ಡಿ ಫೆಲೋಶಿಪ್ ಯೋಜನೆ ಹಾಗೂ ಐಐಟಿ, ಐಐಎಂ, ಐಐಎಸ್‌ಸಿ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಸಹ ಸಕಾಲದ ಅಡಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿದೆ ಎಂದು ಆಕುರಾತಿ ಅವರು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಸ್ಟಾರ್ಟ್ ಅಪ್ ನೋಂದಣಿ ಮತ್ತು ಗೃಹ ಇಲಾಖೆಯಿಂದ ಬಾಡಿಗೆದಾರರ ಪೂರ್ವಾಪರ ಪರಿಶೀಲನೆ ಸೇರಿದಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಉದ್ಯೋಗಾಕಾಂಕ್ಷಿಯ ನೋಂದಣಿ ದಾಖಲೆಯ ವರ್ಗಾವಣೆ, ಉದ್ಯೋಗಾಕಾಂಕ್ಷಿಗಳ ನೋಂದಣಿ, ಉದ್ಯೋಗಾಕಾಂಕ್ಷಿಗಳ ಮರುನೋಂದಣಿ ಮತ್ತು ಉದ್ಯೋಗಾಕಾಂಕ್ಷಿಗಳ ನೋಂದಣಿ ಪತ್ರದ ನವೀಕರಣ ಯೋಜನೆಗಳನ್ನು ಸಹ ಸಕಾಲ ವ್ಯಾಪ್ತಿಗೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ಸಕಾಲ ಮಿಷನ್ ಹೆಚ್ಚುವರಿ ಯೋಜನಾ ನಿರ್ದೇಶಕಿ ತಿಳಿಸಿದ್ದಾರೆ.