ಬೆಂಗಳೂರು : ವಿಧಾನಸಭೆಯ ಅಧಿವೇಶನವು ಜು.15 ರಿಂದ 25ರವರೆಗೆ ಒಟ್ಟು ಎಂಟು ದಿನಗಳ ಕಾಲ ಸುಮಾರು 37 ಗಂಟೆ ಕಾರ್ಯಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ ನಡೆಯುವೆ ಸದನದ ಕಾರ್ಯಕಲಾಪದ ಸಂಕ್ಷಿಪ್ತ ವರದಿ ಪ್ರಕಟಿಸಿದ ಅವರು, ಈ ಅಧಿವೇಶನದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಅಂಗೀಕರಿಸಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದರು.
2024-25ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತನ್ನು ದಿನಾಂಕ:ಜುಲೈ 23 ರಂದು ಮಂಡಿಸಿ, ಜುಲೈ 24 ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲೆ ನೀಡಿರುವ ಲೆಕ್ಕಪರಿಶೋಧನಾ ವರದಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಾಯ್ದೆಯ ಅನುಷ್ಠಾನದ ಮೇಲಿನ ಕಾರ್ಯ ನಿರ್ವಾಹಣಾ ಲೆಕ್ಕಪರಿಶೋಧನಾ ವರದಿ ಹಾಗೂ ಮಾರ್ಚ್ 2022ಕ್ಕೆ ಕೊನೆಗೊಂಡ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ಅನುಸರಣಾ ಲೆಕ್ಕಪರಿಶೋಧನಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನ ಸಭೆಯ ಸರ್ಕಾರಿ ಭರವಸೆಗಳ ಸಮಿತಿಯ 2023-24ನೇ ಸಾಲಿನ ಎರಡನೇ ವರದಿ, ಕರ್ನಾಟಕ ಕರ್ನಾಟಕ ವಿಧಾನಮಂಡಲದ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 2023-24ನೇ ಸಾಲಿನ ಮೂವತ್ತೊಂಭತ್ತನೇ ವರದಿ, ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ 2023-24ನೇ ಸಾಲಿನ ಮೊದಲನೇ ವರದಿ, ಕರ್ನಾಟಕ ವಿಧಾನಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2023-24ನೇ ಸಾಲಿನ ಮೂರನೇ ವರದಿ, ಹಾಗೂ 2023-24ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಮೂರನೇ ವರದಿ, ಹಾಗೂ ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.
ಕರ್ನಾಟಕ ವಿಧಾನಸಭೆಯ ನಿಯಮಾವಳಿ ಸಮಿತಿಯು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 212(1)ಕ್ಕೆ ತಿದ್ದುಪಡಿ ಮಾಡುವ ಸಂಬಂಧ ನಿಯಮಾವಳಿ ಸಮಿತಿಯ ಮಧ್ಯಂತರ ವರದಿಯನ್ನು ಜುಲೈ 24 ರಂದು ಸದನದಲ್ಲಿ ಮಂಡಿಸಲಾಗಿದ್ದು, ಸದನವು ತಿದ್ದುಪಡಿಯನ್ನು ಅಂಗೀಕರಿಸಿರುತ್ತದೆ.
2024-25ನೇ ಸಾಲಿನ ವಿಧಾನಮಂಡಲದ/ ವಿಧಾನ ಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಮಾನ್ಯ ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲು ಜುಲೈ 25 ರಂದು ಸದನವು ಮಾನ್ಯ ಸಭಾಧ್ಯಕ್ಷರಿಗೆ ಅಧಿಕಾರ ನೀಡಿರುತ್ತದೆ.
ಒಟ್ಟು 23 ಅಧಿಸೂಚನೆಗಳು ಮತ್ತು 146 ವಾರ್ಷಿಕ ವರದಿಗಳು, 160 ಲೆಕ್ಕ ಪರಿಶೋಧನಾ ವರದಿಗಳು, 05 ಅನುಪಾಲನಾ ವರದಿಗಳು, 04 ಅನುಸರಣಾ ವರದಿ ಹಾಗೂ 01 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 13 ವಿಧೇಯಕಗಳನ್ನು ಮಂಡಿಸಲಾಗಿದ್ದು, 12 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಉಳಿದಂತೆ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ಪರಿಶೀಲನೆಗಾಗಿ ಒಪ್ಪಿಸಲು ತೀರ್ಮಾನಿಸಲಾಯಿತು.
ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2024ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ.
ನಿಯಮ 60 ರಡಿಯಲ್ಲಿ ನೀಡಿದ್ದ 09 ಸೂಚನೆಗಳ ಪೈಕಿ 08ನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, 01 ಸೂಚನೆಯನ್ನು ತಿರಸ್ಕರಿಸಲಾಗಿದೆ. ಎರಡು ಸೂಚನೆಗಳನ್ನು ಚರ್ಚಿಸಲಾಗಿದೆ. ನಿಯಮ 69 ರಡಿಯಲ್ಲಿ ಒಟ್ಟು 14 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 16 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. ಒಟ್ಟು 2370 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 117 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1902 ಪ್ರಶ್ನೆಗಳ ಪೈಕಿ 1438 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ನಿಯಮ 351 ರಡಿಯಲ್ಲಿ ಸ್ವೀಕೃತವಾದ 154 ಸೂಚನೆಗಳ ಪೈಕಿ 72 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 323 ಸೂಚನೆಗಳ ಪೈಕಿ 170 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ 03 ಸೂಚನೆಗಳನ್ನು ಚರ್ಚಿಸಲಾಗಿದೆ.
ಜುಲೈ 25 ರಂದು ನಡೆದ ಕಲಾಪದ ವೇಳೆ
ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭೆ ಸ್ಥಾನಗಳ ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಸಂಖ್ಯೆಯನ್ನು 1971ರ ಜನಗಣತಿಯನ್ನಾಧರಿಸಿ ನಿರ್ಧರಿಸಬೇಕೆಂಬ ಬಗ್ಗೆ,
‘ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುವುದರಿಂದ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಬಾರದೆಂಬ ಬಗ್ಗೆ
ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸುವ ಬಗ್ಗೆ
ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ, 2006ರರಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವ ಬಗ್ಗೆ ಅಧಿಕೃತ ನಿರ್ಣಯಗಳನ್ನು ಸದನದಲ್ಲಿ ಮಂಡಿಸಲಾಗಿದ್ದು, ಸದನವು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ನಂತರ, ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮಾನ್ಯ ಮುಖ್ಯಮಂತ್ರಿಯವರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಉಪ ಸಭಾಧ್ಯಕ್ಷರಿಗೆ, ಸರ್ಕಾರಿ ಮುಖ್ಯ ಸಚೇತಕರಿಗೆ, ವಿರೋಧ ಪಕ್ಷದ ನಾಯಕರಿಗೆ, ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಎಲ್ಲಾ ಮಾನ್ಯ ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ, ಇಲಾಖಾ ಮುಖ್ಯಸ್ಥರು, ಅಧಿಕಾರಿ-ಸಿಬ್ಬಂದಿಯವರಿಗೆ, ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು