Home ಬೆಂಗಳೂರು ನಗರ ಸರ್ಕಾರಿ ಆಸ್ಪತ್ರೆ, ಶಾಲೆ, ಸಕಾಲ ಸೇವೆಗಳನ್ನು ಜನರಿಗೆ ತಲುಪಿಸಿ: ಕಾರ್ಯಕರ್ತರಿಗೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಲಹೆ

ಸರ್ಕಾರಿ ಆಸ್ಪತ್ರೆ, ಶಾಲೆ, ಸಕಾಲ ಸೇವೆಗಳನ್ನು ಜನರಿಗೆ ತಲುಪಿಸಿ: ಕಾರ್ಯಕರ್ತರಿಗೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಲಹೆ

21
0
Karnataka BJP Minister appeals workers to provide hospital, school related services to people under Sakala

ಬೆಂಗಳೂರು:

ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಹಾಗೂ ಸಕಾಲದಂತಹ ಸೇವೆಗಳನ್ನು ಜನರಿಗೆ ವೈಯಕ್ತಿಕ ಮಟ್ಟದಲ್ಲಿ ಸಿಗುವಂತೆ ಮಾಡಲು ಬಿಜೆಪಿ ಕಾರ್ಯಕರ್ತರು ಗಮನ ಕೊಡಬೇಕು ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಬಿಜೆಪಿ ವತಿಯಿಂದ ಶನಿವಾರ ಇಲ್ಲಿ ನಡೆಸಲಾದ ಬೆಂಗಳೂರು ಉತ್ತರ ಜಿಲ್ಲೆಯ “ಸಂಘಟನಾತ್ಮಕ ವಿಶೇಷ ಸಭೆ”ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಬೆಂಗಳೂರು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ಎಂದು ಆಶಿಸಿದರು.

ಸರ್ಕಾರಿ ಆಸ್ಪತ್ರೆಗಳ ಮತ್ತು ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಈ ಬಗ್ಗೆ ಜನರಿಗೆ ಇನ್ನೂ ಸರಿಯಾದ ಮಾಹಿತಿ ಇಲ್ಲವಾಗಿದೆ. ಈ ಕೊರತೆಯನ್ನು ಹೋಗಲಾಡಿಸುವುದು ಹಾಗೂ ಈ ಸೌಲಭ್ಯಗಳನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸುವುದರಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದರು.

ಜನರಿಗೆ ಸೇವೆಗಳನ್ನು ಸುಲಭವಾಗಿ ತಲುಪಿಸುವುದಕ್ಕೆಂದು ಡಿ.ವಿ.ಸದಾನಂದಗೌಡರು ತಮ್ಮ ಆಡಳಿತಾವಧಿಯಲ್ಲಿ ಸಕಾಲ ಸೇವೆಯನ್ನು ಪರಿಚಯಿಸಿದರು. ಆದರೆ ಇದನ್ನು ಬಳಸಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಇದೆ. ಇಂದು ತಂತ್ರಜ್ಞಾನದಿಂದಾಗಿ ಜನರ ಬೆರಳ ತುದಿಗೆ ಆಡಳಿತದ ಸೇವೆಗಳನ್ನು ತಲುಪಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಜನರೊಂದಿಗೆ ಸಂಪರ್ಕದಲ್ಲಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಜನರು ಖಾತೆ ಮಾಡಿಸುವುದಕ್ಕಾಗಲೀ, ಮತ್ತೊಂದಕ್ಕಾಗಲೀ ಬ್ರೋಕರ್ ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇಲ್ಲದಂತೆ ಮಾಡಬೇಕು. ಕಾರ್ಯಕರ್ತರು ಬರೀ ನಾಯಕರ ಹಿಂದೆ ಓಡಾಡುವುದನ್ನು ಬಿಟ್ಟು ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು.. ಬದಲಿಗೆ, ಎಲ್ಲಿ ಅಗತ್ಯವೋ ಅಂತಹ ಕಡೆಗಳಲ್ಲಿ ತಾವು ಇದ್ದು ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.

ಅದೇ ರೀತಿ, ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನ ಪಡಿತರ ಕಾರ್ಡ್ ನಿಂತ ವಂಚಿತರಾಗಿದ್ದು, ಕಾರ್ಯಕರ್ತರು ಅರ್ಹರಿಗೆ ಕಾರ್ಡ್ ಸಿಗುವಂತೆ ಮುತುವರ್ಜಿ ವಹಿಸಬೇಕು. ಅರ್ಹ ವಸತಿ ರಹಿತರು ಮುಖ್ಯಮಂತ್ರಿಗಳ ಗೃಹ ವಸತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಹಾಕುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಕೊರೋನಾ ತಡೆಗಟ್ಟಲು ಸರ್ಕಾರ ಉಚಿತವಾಗಿ ನೀಡುತ್ತಿರುವ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತಲುಪಿಸುವುದರ ಬಗ್ಗೆಯೂ ಕಾರ್ಯಕರ್ತರು ಒತ್ತು ಕೊಡಬೇಕು ಎಂದು ಸಚಿವರು ಹೇಳಿದರು.

ಹಾಗೆಯೇ, ಸರ್ಕಾರದ ಕಾರ್ಯನಿರ್ವಹಣೆ ಬಗೆಗೆ ವ್ಯವಸ್ಥಿತ ರೀತಿಯಲ್ಲಿ ಅಭಿಪ್ರಾಯ ಸಂಗ್ರಹದ ಕೆಲಸ ಆಗಬೇಕು. ನಾಯಕರ ಕಿವಿಯಲ್ಲಿ ಏನೋ ಒಂದನ್ನು ಹೇಳಿಬಿಟ್ಟರೆ ಅದು ಅಭಿಪ್ರಾಯ ತಿಳಿಸಿದಂತೆ ಆಗುವುದಿಲ್ಲ. ಬೂತ್ ಮಟ್ಟದಿಂದ ಶುರುವಾಗುವ ಅಭಿಪ್ರಾಯ ಸಂಗ್ರಹವನ್ನು ಆಡಳಿತ ನಡೆಸುವವರಿಗೆ ತಲುಪಿಸಲು ಒಂದು ಕ್ರಮಬದ್ಧ ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.

ಜನರ ನಂಬಿಕೆಯೇ ಪಕ್ಷದ ಜೀವಾಳ. ಹಣ ಬಲವೊಂದೇ ನಾಯಕತ್ವದ ಮಾನದಂಡ ಆಗಲಾರದು. ಹೊಟ್ಟೆಪಾಡಿಗಾಗಿ ರಾಜಕೀಯ ಮಾಡುವ ಪರಿಸ್ಥಿತಿ ಬರಬಾರದು. ಬದಲಿಗೆ, ಉತ್ತಮ ನಾಯಕತ್ವ ಕೊಡುವುದಕ್ಕಾಗಿ ರಾಜಕೀಯ ಕ್ಷೇತ್ರವು ವೇದಿಕೆಯಾಗಬೇಕು. ಈ ಬಗ್ಗೆ ರಾಜಕೀಯ ಮುಖಂಡರಲ್ಲಿ ಮತ್ತು ಕಾರ್ಯಕರ್ತರಲ್ಲಿ ಸ್ಪಷ್ಟತೆ ಇರಬೇಕು ಎಂದರು.

ಬೆಂಗಳೂರು ಉತ್ತರ ಲೋಕಸಭಾ ಸದಸ್ಯ, ಡಿ.ವಿ.ಸದಾನಂದಗೌಡ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಬಕಾರಿ ಸಚಿವ ಗೋಪಾಲಯ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಗೋಪಿನಾಥ್ ರೆಡ್ಡಿ, ರಾಜಣ್ಣ, ಮಹಿಳಾ ಮೋರ್ಛಾದ ಅಧ್ಯಕ್ಷೆ ಗೀತಾ ವಿವೇಕಾನಂದ್ ಅವರು ಇದ್ದರು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಮಾಜಿ ಶಾಸಕ ಮುನಿರಾಜು, ಹಿಂದುಳಿದ ವರ್ಗಗಳ ಮೋರ್ಛಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here