ಬೆಂಗಳೂರು:
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಗೋದಾಮುಗಳಿಗೆ ಸಿಸಿ ಟಿವಿ ಅಳವಡಿಕೆಗೆ ಸಂಪುಟ ಸಭೆ ನಿರ್ಧಾರ ಮಾಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ ಪಾಟೀಲ್, ‘ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಎಲ್ಲ ಸಗಟು ಗೋದಾಮುಗಳಲ್ಲಿ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಲು 12.44 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆ.ಟಿ.ಪಿ.ಪಿ) ಕಾಯ್ದೆಯನ್ವಯ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮೋದಿಸಿದೆ’ ಎಂದು ತಿಳಿಸಿದರು.
ದೈಹಿಕ ವಿಕಲಚೇತನರಿಗೆ ಉದ್ಯೋಗ ಕೈಗೊಳ್ಳಲು ಅಥವಾ ಅವರು ಉದ್ಯೋಗ ನಿರ್ವಹಿಸುವ ಸ್ಥಳಕ್ಕೆ, ಉನ್ನತ ಶಿಕ್ಷಣ ಕಾಲೇಜುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ 4 ಸಾವಿರ ರೆಟ್ರೋಫಿಟೆಡ್ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 36 ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಮೂಲಕ ಖರೀದಿಸಿ ವಿತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
2023-24ನೆ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 4 ಲಕ್ಷ ಮೆಟ್ರಿಕ್ ಟನ್ ರಾಗಿ ಸಂಗ್ರ್ರಹಿಸಲು ಅಗತ್ಯವಿರುವ 80 ಲಕ್ಷ ಗೋಣಿ ಚೀಲಗಳನ್ನು, ಸೆಣಬು ದಾರವನ್ನೊಳಗೊಂಡಂತೆ ಖರೀದಿಸಿಸಲು 76 ಕೋಟಿ ರೂ.ಗಳ ಅನುದಾನ ಮಿತಿಗೊಳಪಡಿಸಿ ಮುಕ್ತ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಣಗಳಲ್ಲಿ (ಬಿಬಿಎಂಪಿ ಹೊರತುಪಡಿಸಿ) 188 ಇಂದಿರಾ ಕ್ಯಾಂಟೀನ್‍ಗಳನ್ನು ಅನುಮೋದಿತ ಮಾದರಿ ವಿನ್ಯಾಸದ ಪ್ರಕಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ಕಲಂ 4(ಜಿ) ವಿನಾಯತಿ ನೀಡಿ ಒಟ್ಟು ವೆಚ್ಚ 154.59 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.