ಬೆಂಗಳೂರು:
ಮೈಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭ ಸಂಬಂಧ ಅತಿ ಶೀಘ್ರದಲ್ಲಿ ಸಚಿವ ಸಂಪುಟ ಉಪ ಸಮಿತಿ ವರದಿ ಪಡೆದು ತೀರ್ಮಾನ ಕೈಗೊಳ್ಳಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭದ ಬಗ್ಗೆ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ವಿಷಯ ಪ್ರಸ್ತಾಪಿಸಿ, ಚರ್ಚೆ ನಡೆಸಿದರು.
ಸಚಿವ ಡಾ.ನಾರಾಯಣಗೌಡ ಅವರು ಪ್ರಸ್ತಾಪಿಸಿದ ಮೈಶುಗರ್ ಕಾರ್ಖಾನೆ ಪುನಾರಂಭದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹುದ್ಯೋಗಿಗಳು ಸುದೀರ್ಘ ಚರ್ಚೆ ನಡೆಸಿದರು. ಈ ಸಂಬಂಧ ಸಂಪುಟ ಉಪ ಸಮಿತಿ ಅಸ್ತಿತ್ವದಲ್ಲಿದೆ. ಸಮಿತಿ ತಕ್ಷಣ ಸಭೆ ನಡೆಸಿ ವರದಿ ಸರ್ಕಾರಕ್ಕೆ ವರದಿ ನೀಡಬೇಕು. ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಸಮಿತಿ ಸಭೆ ನಡೆಸಿ ವರದಿ ನೀಡಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದ್ದಾರೆ.
ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರವೇ ನಡೆಸುವುದಾದರೆ ಯಾವ ರೀತಿ ಕ್ರಮ ವಹಿಸಬೇಕು. ಅಥವಾ ಖಾಸಗಿಯವರಿಗೆ ನೀಡಬೇಕೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಸಕ್ಕರೆ ಸಚಿವ ಶಂಕರಮುನೇನಕೊಪ್ಪ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯಲ್ಲಿ ಸಚಿವರಾದ ಡಾ.ನಾರಾಯಣಗೌಡ, ಆರ್. ಅಶೋಕ್, ಗೋವಿಂದ ಕಾರಜೋಳ ಸದಸ್ಯರಾಗಿದ್ದಾರೆ.