ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿ ಗಣತಿ) ವರದಿ ಬಗ್ಗೆ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಸಚಿವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚರ್ಚೆ ಅಪೂರ್ಣವಾಗಿದೆ. ಅಲ್ಲದೆ, ಈ ಸಭೆಯಲ್ಲಿ ಯಾವುದೇ ಮಹತ್ವದ ತೀರ್ಮಾನವಾಗಿಲ್ಲ.
ಸಚಿವ ಸಂಪುಟ ಸಭೆ ಮುಗಿದ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಜಾತಿ ಗಣತಿ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದರು.
ಈ ಬಗ್ಗೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸಚಿವರು ಅಸಮಾಧಾನ ವ್ಯಕ್ತಪಡಿಸಿಲ್ಲ. ದತ್ತಾಂಶಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಇನ್ನು ತಾಂತ್ರಿಕ ಅಂಶಗಳು ಅವಶ್ಯ ಎಂದು ಭಾವಿಸಿ, ಹಿರಿಯ ಅಧಿಕಾರಿಗಳಿಗೆ ತಾಂತ್ರಿಕ ದತ್ತಾಂಶ ಒದಗಿಸುವಂತೆ ಸೂಚಿಸಿದ್ದೇವೆ ಎಂದರು.
ಚರ್ಚೆ ಅಪೂರ್ಣವಾಗಿದ್ದು, ಕೆಲವು ಸಚಿವರು ತಾಂತ್ರಿಕ ಮಾಹಿತಿಯನ್ನು ಕೇಳಿದ್ದಾರೆ. ಆ ಮಾಹಿತಿಯನ್ನು ಒದಗಿಸಲಾಗುವುದು. ಇಲಾಖೆ ಮಂತ್ರಿಯಾಗಿರುವ ಕಾರಣ ಆ ಮಾಹಿತಿಯನ್ನು ಒದಗಿಸುತ್ತೇನೆ. ಮುಂದಿನ ಮೇ 2 ರಂದು ನಡೆಯುವ ಸಚಿವ ಸಂಪುಟ ಸಭೆಗೆ ವರದಿಯ ವಿಷಯ ಚರ್ಚೆಗೆ ಬರಲಿದ್ದು, ವಿಸ್ತೃತವಾದ ಚರ್ಚೆ ನಡೆಯಲಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಯಾರು ಕೂಡ ಏರು ಧ್ವನಿಯಲ್ಲಿ ಮಾತನಾಡಿಲ್ಲ, ಅದೆಲ್ಲವೂ ಕೇವಲ ಊಹಾಪೋಹಗಳು ಎಂದರು.
ವರದಿ ಕುರಿತು ಪರ ಅಥವಾ ವಿರೋಧವಿರಲಿ, ಲಿಖಿತವಾಗಿ ಅಭಿಪ್ರಾಯಗಳನ್ನು ನೀಡಲು ಎಲ್ಲಾ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಮಹತ್ವ ಪಡೆದಿದ್ದ ವಿಶೇಷ ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿಯ ಬಗ್ಗೆ ಚರ್ಚೆ ಅಷ್ಟೇ ನಡೆದಿದ್ದು, ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.