ಬೆಂಗಳೂರು: ‘ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿ ಗಣತಿ) ವರದಿ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಮಧ್ಯೆ ಏರುಧ್ವನಿಯಲ್ಲಿ ಮಾತುಕಥೆ ಆಗಿದೆ ಎಂಬುದು ಸುಳ್ಳು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವಿವರಣೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ನಾವು ಯಾರೂ ಏರುಧ್ವನಿಯಲ್ಲೂ ಮಾತಾಡಿಲ್ಲ, ಕೆಳಧ್ವನಿಯಲ್ಲೂ ಮಾತಾಡಿಲ್ಲ. ವಿಚಾರ ವಿನಿಮಯ ಮಾಡಿದ್ದೇವೆ ಅಷ್ಟೇ. ಯಾರೊಬ್ಬರೂ ಯಾವುದೇ ರೀತಿಯಲ್ಲಿಯೂ ಪ್ರತಿರೋಧ ವ್ಯಕ್ತಪಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಎಲ್ಲ ಸಚಿವರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಇದರ ಹೊರತಾಗಿ ಬೇರೆ ಯಾವುದೇ ಚರ್ಚೆ, ತೀರ್ಮಾನ ಆಗಿಲ್ಲ. ಚರ್ಚೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಮಡಿವಾಳ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಲು ಬದ್ಧ: ಮಡಿವಾಳ ಸಮುದಾಯ ಸದಾ ನಮ್ಮ ಬೆಂಬಲಕ್ಕೆ ನಿಂತಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲು ನಮ್ಮ ಸರಕಾರ ಸದಾ ಬದ್ಧವಾಗಿದೆ. ಈ ಸಮಾಜದ ಜತೆಗಿನ ಒಡನಾಟದಲ್ಲಿ ನಿಮ್ಮ ಸಮಸ್ಯೆ, ಹೋರಾಟವನ್ನು ನಾನು ನೋಡಿದ್ದೇನೆ ಈ ಸಮುದಾಯದ ಜನ ನೂರಕ್ಕೆ 99ರಷ್ಟು ಭಾಗ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಶಿವಕುಮಾರ್ ನುಡಿದರು.