Karnataka CET: Change in Sports Quota
ಬೆಂಗಳೂರು:
ವೃತ್ತಿ ಶಿಕ್ಷಣ ಕೋರ್ಸುಗಳಿಗೆ ನಡೆಸಲಾಗುವ ಸಿಇಟಿ ಪರೀಕ್ಷೆ ವೇಳೆ ಉಂಟಾಗುತ್ತಿರುವ ಕ್ರೀಡಾ ಕೋಟಾದ ನಿಯಮಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ಬದಲಾವಣೆಗೆ ತರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ 2006ರ ನಿಯಮಗಳನ್ವಯ ಪ್ರಸ್ತುತ ಇರುವ ಕ್ರೀಡಾ ಕೋಟಾದ ನಿಯಮಗಳಲ್ಲಿ ಕೆಲವು ಅಸ್ಪಷ್ಟತೆಯಿದ್ದು, ಅದನ್ನು ಪರಿಷ್ಕರಿಸಲು ನಿರ್ಧರಿಸಲಾಯಿತು.
ರಾಜ್ಯ ಕ್ರೀಡಾ ಇಲಾಖೆ ಈಗಾಗಲೇ ಪರಿಷ್ಕೃತ ಕ್ರೀಡಾ ಕೋಟಾದ ವರದಿಯನ್ನು ನೀಡಿದ್ದು, ಈ ಪ್ರಕಾರ ಅಧಿಕೃತವಾಗಿ ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಕ್ರೀಡಾ ಕೋಟಾದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಗಣಿಸಲಾಗುತ್ತದೆ.
ಕೆ.ಇ.ಎ ಪ್ರಾಧಿಕಾರದ ಕಟ್ಟಡದ ಮರು ವಿನ್ಯಾಸ ಹಾಗೂ ಹೆಚ್ಚುವರಿ ಕಟ್ಟಡ ನಿರ್ಮಾಣ ಕುರಿತು ಚರ್ಚಿಸಲಾಯಿತು. ಅತ್ಯಂತ ಅಗತ್ಯವಾಗಿ ಸುಸಜ್ಜಿತ ನೂತನ ಕಟ್ಟಡ ಅವಶ್ಯಕತೆಯಿರುವುದರಿಂದ ಈ ಬಗ್ಗೆ ಕರ್ನಾಟಕ ಹೌಸಿಂಗ್ ಬೋರ್ಡ್ ಇಂಜಿನಿಯರ್ ಗಳು ನೀಡಿದ ಪಿಪಿಟಿ ವೀಕ್ಷಿಸಲಾಯಿತು. ಸುಮಾರು 33 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣದ ಕಾರ್ಯವನ್ನು ಕೈಗೊಳ್ಳುವ ಬಗ್ಗೆ ಒಪ್ಪಿಗೆ ನೀಡಲಾಯಿತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಹೆಚ್ಚು ಉತ್ತರದಾಯಿತ್ವ ಸಂಸ್ಥೆಯಾಗಿ ರೂಪಿಸಲು ಮತ್ತಷ್ಟು ಉತ್ತಮ ಕಾರ್ಯನಿರ್ವಹಣೆಗೆ ಮುಂದಾಗಲು ಸೂಚಿಸಲಾಯಿತು.
ಸಭೆಯ ಮುನ್ನ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಸಿಇಟಿ ಕೇಂದ್ರದಲ್ಲಿ ಕೌನ್ಸಿಲಿಂಗ್‌ಗೆ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲೇಜುಗಳ ಆಯ್ಕೆ ಸಂಬಂಧ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ತರಬೇತಿ ನೀಡುವ ಕಾರ್ಯವನ್ನು ಮುಂದಿನ ವರ್ಷದಿಂದ ಕೈಗೊಳ್ಳಲು ಸೂಚಿಸಲಾಯಿತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಡಾ. ಶರಣಪ್ರಕಾಶ್ ಪಾಟೀಲ್, ಪ್ರಭಾರ ಕಾರ್ಯದರ್ಶಿ ಉಮಾಶಂಕರ್, ಆಯುಕ್ತರಾದ ಶ್ರೀ ಜಗದೀಶ್, ಕೆಇಎ ಕಾರ್ಯನಿರ್ವಾಹ ನಿರ್ದೇಶಕರಾದ ಶ್ರೀಮತಿ ರಮ್ಯ ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
