ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ನವೀನ್ ಮೃತದೇಹ ತಯ್ನಾಡಿಗೆ ತರುವುದು ಆದ್ಯತೆ
ಹಾವೇರಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಕ್ರೇನ್ ನಲ್ಲಿ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೆರೆಯ ನವೀನ್ ಗ್ಯಾನಗೌಡರ್ ಅವರ ಕುಟುಂಬದವರಿಗೆ ೨೫ ಲಕ್ಷ ರೂಪಾಯಿ ಆರ್ಥಿಕ ನೆರವಿನ ಚೆಕ್ ನ್ನು ಹಸ್ತಾಂತರಿಸಿದರು.
ಅವರ ಮತ್ತೊಬ್ಬ ಮಗನಿಗೆ ಕೆಲಸದ ಅವಕಾಶವನ್ನು ಮಾಡಿಕೊಡಲಾಗುವುದು ಎಂದರು.
ಅದರ ಜತೆ ಅವರ ಕುಟುಂಬದ ಪಾರ್ಥಿವ ಶರೀರ ತಾಯ್ನಾಡಿಗೆ ತರುವುದು ಹಾಗೂ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್ಸು ಕರೆತರುವುದು ನಮ್ಮ ಪ್ರಥಮ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಣಿಬೆನ್ನೂರು ತಾಲ್ಲೂಕಿನ ಚಳಗೇರಿಯಲ್ಲಿರುವ ನವೀನ್ ಗ್ಯಾನಗೌಡರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
‘ನವೀನ್ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ನಾನು ನಿರಂತರವಾಗಿ ವಿದೇಶಾಂಗ ಸಚಿವ ಜಯಶಂಕರ್ ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಉಕ್ರೇನ್ ರಾಯಭಾರಿಗಳೊಂದಿಗೂ ಸಂಪರ್ಕದಲ್ಲಿದ್ದೇನೆ’ ಎಂದು ತಿಳಿಸಿದರು.
‘ನಿನ್ನೆ ರಾತ್ರಿಯ ಮಾಹಿತಿಯ ಪ್ರಕಾರ ನವೀನ್ ದೇಹವನ್ನು ಸಂರಕ್ಷಿಸಿ, ನಗರದ ಹೊರಗಿರುವ ಶವಾಗಾರದಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಯುದ್ಧವಿರಾಮ ಘೋಷಿಸಲಾಗಿದೆ . ಬಾಂಬ್ ದಾಳಿ ನಿಂತ ಬಳಿಕ ದೇಹವನ್ನು ಪಡೆದು ಇಲ್ಲಿಗೆ ಕರೆತರಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ತೆರಳಿದ ಬಳಿಕೆ ಪುನ: ಮಾತನಾಡಿ ಆದಷ್ಟು ಬೇಗ ನವೀನ್ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲಿಯ ಸ್ಥಿತಿಗತಿಯ ಮೇಲೆ ಇದು ಅವಲಂಬಿಸಿದೆ. ಯುದ್ಧ ಆದಷ್ಟು ಬೇಗ ನಿಲ್ಲಲಿ’ ಎಂದು ಹಾರೈಸುವುದಾಗಿ ತಿಳಿಸಿದರು.
ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಸಾವು ನಮಗೆಲ್ಲಾ ದಿಗ್ಭ್ರಮೆ ಮೂಡಿಸಿದೆ. ಅವನ ಸಾವು ಅತ್ಯಂತ ದು:ಖದ ಸಂಗತಿ. ತನ್ನ ಬದುಕನ್ನು ಕಟ್ಟಿಕೊಳ್ಳಲೆಂದು, ವಿದ್ಯಾರ್ಜನೆಗಾಗಿ ಅಷ್ಟು ದೂರ ತೆರಳಿದ ನವೀನ್ ಗೆ ಈ ರೀತಿಯ ಸಾವು ಒದಗಿರುವುದು ಖೇದಕರ. ಯಾರೂ ಇದನ್ನು ಊಹಿಸಿಯೂ ಇರಲಿಲ್ಲ. ಯುದ್ಧದ ನಡುವೆಯೂ ಹಲವರು ಮರಳಿ ಬಂದಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇನ್ನೂ ಬಹಳಷ್ಟು ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ. ಖಾರಕೈವ್ ನಿಂದ ಸುಮಾರು 30 ಕಿ.ಮೀ ಬಂದು ಒಮದು ಪ್ರದೇಶದಲ್ಲಿ ಸುರಕ್ಷಿತವಾಗಿ ಕೆಲವು ವಿದ್ಯಾರ್ಥಿಗಳಿದ್ದಾರೆ. ಅಲ್ಲಿಂದ ಮುಂದಕ್ಕೆ ಸಾರಿಗೆ ವ್ಯವಸ್ಥೆ ಆಗುತ್ತಿದೆ. ಅಲ್ಲಿಂದ ಮಕ್ಕಳು ನಡೆದುಕೊಂಡು ಬಂದಿದ್ಧಾರೆ. ಇನ್ನು ಕೆಲವರು ಬಂಕರ್ ಗಳಲ್ಲಿ ನೆಲೆಸಿದ್ದಾರೆ. 2 ದಿನಗಳ ಯುದ್ಧ ವಿರಾಮವಿರುವುದರಿಂದ ಅವರನ್ನು ಕರೆ ತರುವ ಸಾಧ್ಯಗಳಿವೆ ಎಂದರು.
ವ್ಯವಸ್ಥೆಯಲ್ಲಿ ಬದಲಾವಣೆಗೆ ಚಿಂತನೆ
ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥಯ ಬಗ್ಗೆ ಚಿಂತನೆ ಮಾಡಬೇಕಿದೆ. ಮೆರಿಟ್ ಇದ್ರೂ ಕೂಡ ಮಕ್ಕಳು ಏನು ಓದಬೇಕೋ ಅದಕ್ಕೆ ವ್ಯವಸ್ಥೆಯಲ್ಲಿ ಅವಕಾಶವಿಲ್ಲ ಎನ್ನುವುದನ್ನು ಈ ಘಟನೆ ತೋರಿಸುತ್ತಿದೆ. ಈ ಕುರಿತು ಪುನರ್ ಪರಿಶೀಲನೆಯ ಅಗತ್ಯವಿದೆ. ಕೇಂದ್ರ ಮಟ್ಟದಲ್ಲಿಯೂ ಗಂಭೀರವಾದ ಚರ್ಚೆ ನಡೆದಿದೆ. ಘಟನೆಯ ಬಳಿಕೆ ರಾಜ್ಯ ಸರ್ಕಾರವೂ ಉನ್ನತ ಮಟ್ಟದ ಸಭೆಯನ್ನು ಕರೆದು ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕ ಹಾಗೂ ಆರ್ಥಿಕ ಸಹಾಯಗಳನ್ನು ಮಾಡಬಹುದು ಆದರೆ, ಆಯ್ಕೆ ಪ್ರಕ್ರಿಯೆ ಕೇಂದ್ರ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕಿದೆ ಎಂದರು.