ಹೊಸಪೇಟೆ/ಬೆಂಗಳೂರು:
ರಾಜ್ಯದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಕಟ್ಟೆಚ್ಚರಿಕೆ ವಹಿಸಬೇಕು. ಮಳೆಹಾನಿ ಸಂಭವಿಸಿದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದರು.
ಅವರು ಇಂದು ಹೊಸಪೇಟೆಯಿಂದ ಮಳೆಹಾನಿ ಸಂಭವಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು. ಮನೆಗಳಿಗೆ ಸಂಬಂಧಿಸಿದ ಹಾನಿಯನ್ನು ದಾಖಲಿಸುವ ಹಂತದಲ್ಲಿಯೇ ಕೆಲವೆಡೆ ಲೋಪಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಲೋಪವಾಗದಂತೆ ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು. ವಸ್ತುಸ್ಥಿತಿ ಆಧರಿಸಿ, ಪರಿಹಾರ ಕೋರಿ ಬಂದ ಮನವಿಗಳನ್ನು ದಾಖಲಿಸಬೇಕು. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
Also Read: Karnataka rains: 13 dead so far since Oct 1; CM’s direction to officials on relief
ಮನೆ ಹಾನಿಗೆ ಸಂಬಂಧಿಸಿದಂತೆ ಎನ್ಡಿಆರ್ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸುವಂತೆ ವಿಪತ್ತು ನಿರ್ವಹಣೆ ಆಯುಕ್ತರಿಗೆ ಸೂಚನೆ ನೀಡಿದರು.
ಮಳೆಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಹಾರ ವಿತರಣೆ, ಮಾಹಿತಿ ದಾಖಲಿಸುವಲ್ಲಿ ಲೋಪಗಳಾಗದಂತೆ ತಹಸೀಲ್ದಾರರಿಗೆ ಮಾರ್ಗಸೂಚಿ ನೀಡಬೇಕು.
ಬೆಳೆಹಾನಿ ಪರಿಹಾರ ವಿತರಣೆಯನ್ನೂ ತ್ವರಿತವಾಗಿ ವಿತರಿಸಬೇಕು. ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಿದ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಲು ಸೂಚನೆ ನೀಡಲಾಯಿತು.
ಮುಖ್ಯಮಂತ್ರಿ @BSBommai ಅವರು ಇಂದು ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
— CM of Karnataka (@CMofKarnataka) October 13, 2022
ಸಚಿವರಾದ @GovindKarjol ಹಾಗೂ @ShashikalaJolle ಉಪಸ್ಥಿತ ರಿದ್ದರು.
ಇತರ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. pic.twitter.com/xzKJMrYWYs
ಮೂಲಸೌಲಭ್ಯ ಹಾನಿ ವರ್ಗೀಕರಣ
ಮೂಲಸೌಲಭ್ಯ ಹಾನಿಗೆ ಸಂಬಂಧಿಸಿದಂತೆ ಹಾನಿಯ ತೀವ್ರತೆಯನ್ನು ಆಧರಿಸಿ, ಸಿ ವರ್ಗ- ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ದುರಸ್ತಿ, ಬಿ ವರ್ಗ- ಸರ್ಕಾರದಿಂದ ಹೆಚ್ಚುವರಿ ನೆರವು ಅಗತ್ಯವಿರುವ ಕಾಮಗಾರಿಗಳು, ಎ- ಸಂಪೂರ್ಣ ಪುನರ್ ನಿರ್ಮಾಣ ಅಗತ್ಯವಿರುವ ಕಾಮಗಾರಿಗಳು- ಎಂದು ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಯಿತು.
ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಹ ಸೂಚನೆ ನೀಡಿದರು. ಕೆರೆಗಳು ದುರ್ಬಲವಾಗಿರುವುದು, ನೀರಿನ ಒತ್ತಡ ಹೆಚ್ಚಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸೇತುವೆಗಳ ನಿರ್ಮಾಣದ ವಿಷಯದಲ್ಲಿಯೂ ಆದ್ಯತೆಯನ್ನು ಗುರುತಿಸಿ, ಅದರಂತೆ ದುರಸ್ತಿ, ಮರುನಿರ್ಮಾಣ ಮಾಡಬೇಕು ಎಂದರು.
ವಿದ್ಯುತ್ ಕಂಬಗಳು, ಟ್ರಾನ್ಸ್್ಫಾೊರ್ಮರುಗಳನ್ನು 24 ಗಂಟೆಗಳೊಳಗೆ ಸರಿಪಡಿಸಿ, ವಿದ್ಯುತ್ ಸಂಪರ್ಕ ಒದಗಿಸಬೇಕು.
ದಿಢೀರ್ ಪ್ರವಾಹದ ವಿರುದ್ಧ ಮುನ್ನೆಚ್ಚರಿಕೆ
ದಿಢೀರ್ ಪ್ರವಾಹ ಉಂಟಾಗುವ ಹೊಳೆ, ಹಳ್ಳಗಳ ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಅನುದಾನ ಕೊರತೆ ಇಲ್ಲ
ಬೆಳೆಹಾನಿ ಹಾಗೂ ಮನೆಹಾನಿಗೆ ಪರಿಹಾರ ನೀಡಲು ಅನುದಾನದ ಕೊರತೆ ಇಲ್ಲ. ಮೂಲಸೌಕರ್ಯ ಹಾನಿಗೆ ಬಿಡುಗಡೆ ಮಾಡಲಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನಗೊಳಿಸುವಂತೆ ಸೂಚಿಸಲಾಯಿತು.
ಮೂಲಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಮೂರು ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಮುಖ್ಯಮಂತ್ರಿಯವರೊಂದಿಗೆ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ದಿನಾಂಕ 1-10-2022ರಿಂದ ಈ ವರೆಗೆ ಸಂಬಂಧಿಸಿದಂತೆ ವರದಿಯಾಗಿರುವ ಮಳೆಹಾನಿಯ ವಿವರ:
- ಜೀವಹಾನಿ- 13
- ಜಾನುವಾರುಗಳ ಸಾವು- 28
- ಮನೆಹಾನಿ- 3309
- ಬೆಳೆಹಾನಿ- 6279 ಹೆಕ್ಟೇರ್
- ಕಾಳಜಿ ಕೇಂದ್ರಗಳ ಸ್ಥಾಪನೆ- 5, ಆಶ್ರಯ ಪಡೆದವರ ಸಂಖ್ಯೆ 1330
ಪರಿಹಾರ ವಿತರಣೆ ವಿವರ ಬೆಳೆಹಾನಿ ಪರಿಹಾರ:
ಮುಂಗಾರು ಹಂಗಾಮಿನಲ್ಲಿ ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇನ್ನು ಎರಡು ದಿನಗಳಲ್ಲಿ ಇನ್ನೊಂದು ಹಂತದಲ್ಲಿ ಸುಮಾರು 2 ಲಕ್ಷ ರೈತರಿಗೆ ಅಂದಾಜು 250 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮನೆಹಾನಿ ಪರಿಹಾರ
ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ 48485 ಮನೆ ಹಾನಿ ಸಂಭವಿಸಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 635.13 ಕೋಟಿ ರೂ. ಲಭ್ಯವಿದೆ.