ಕಲಬುರಗಿ:
ಶನಿವಾರ ಲೋಕೋಪಯೋಗಿ ಭವನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ 14 ಲಕ್ಷ ರೂ. ಸಾಲ-ಸೌಲಭ್ಯ ಪಡೆದ 5 ಜನ ಫಲಾನುಭವಿಗಳಿಗೆ ಸಹಾಯ ಧನದ ಚೆಕ್ ವಿತರಿಸಿದರು.
ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಜೇವರ್ಗಿ ತಾಲೂಕಿನ ಶೃತಿ ಹರಿಶ್ಚಂದ್ರ ಮತ್ತು ಗಂಗಮ್ಮ ಚನ್ನಬಸಪ್ಪ ಅವರಿಗೆ ತಲಾ 4,83,750 ರೂ. ಹಾಗೂ ಕಲಬುರಗಿಯ ಶಹಾಬಜಾರ ಪ್ರದೇಶದ ಶ್ರೀ ಅಣವೀರಭದ್ರೇಶ್ವರ ಮಹಿಳಾ ಸ್ವ ಸಹಾಯ ಸಂಘಕ್ಕೆ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ 1.50 ಲಕ್ಷ ರೂ.ಗಳ ಸಹಾಯಧನದ ಚೆಕ್ ವಿತರಿಸಿದರು.
ಅದೇ ರೀತಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನೇರ ಸಾಲ ಯೋಜನೆಯಡಿ ಆಳಂದ ತಾಲೂಕಿನ ಶಾಖಾಪೂರ ಗ್ರಾಮದ ಅರ್ಜುನ್ ಗುರುಸಿದ್ದ ಕಾಳೆ ಅವರಿಗೆ 2.50 ಲಕ್ಷ ರೂ. ಮತ್ತು ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘಕ್ಕೆ 35,000 ರೂ. ಸಹಾಯಧನದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ. ಕಾರಜೋಳ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್. ನಿರಾಣಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಸೇರಿದಂತೆ ಜಿಲ್ಲೆಯ ಶಾಸಕ-ಸಂಸದರು, ಇನ್ನಿತರ ಜನಪ್ರತಿನಿಧಿಗಳು ಅಧಿಕಾರಿಗಳು ಇದ್ದರು.