ಸದ್ಯ 32,009 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯ ಇದ್ದು-ಕಳೆದ ನಾಲ್ಕು ವರ್ಷಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗಿಲ್ಲ
ನಮ್ಮ ಮೊದಲ ಅವಧಿಯ ಸರ್ಕಾರದಲ್ಲಿ ಉತ್ಪಾದನೆ ದುಪ್ಪಟ್ಟಾಗಿತ್ತು
2013 -14ರಲ್ಲಿ 14,048 ಮೆಗಾವ್ಯಾಟ್ ಇದ್ದದ್ದು 2017-18ರ ವೇಳೆಗೆ 27,780 ಮೆಗಾವ್ಯಾಟ್‌ಗೆ ಉತ್ಪಾದನೆ ಏರಿಕೆಯಾಗಿತ್ತು: ಸಿಎಂ
ಬೆಂಗಳೂರು:
ರಾಜ್ಯದ ವಿದ್ಯುತ್ ಉತ್ಪಾದನೆ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿತ ಕಂಡಿರುವುದು ಏಕೆ ಎಂದು ಮುಖ್ಯಮಂತ್ರಿ ಸಿದ್ದರಿಮಾಯ್ಯ ಅವರು ಪ್ರಶ್ನಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಶ್ನಿಸಿದರು.
32,009 ಮೆಗಾ ವ್ಯಾಟ್ ಉತ್ಪಾದನೆ ಸಾಮರ್ಥ್ಯ ಇದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗದಿರುವುದಕ್ಕೆ ವಿವರಣೆಗಳನ್ನು ಕೇಳಿದರು.
ನಮ್ಮ ಮೊದಲ ಅವಧಿಯ ಸರ್ಕಾರದಲ್ಲಿ ಎಲ್ಲಾ ಸಮಸ್ಯೆಗಳ ನಡುವೆಯೇ ವಿದ್ಯುತ್ ಉತ್ಪಾದನೆ ದುಪ್ಪಟ್ಟಾಗಿತ್ತು. ನಾವು ಅಧಿಕಾರಕ್ಕೆ ಬಂದ 2013 -14ರಲ್ಲಿ 14,048 ಮೆಗಾವ್ಯಾಟ್ ಉತ್ಪಾದನೆ ಆಗುತ್ತಿತ್ತು. 2017-18ರ ವೇಳೆಗೆ 27,780 ಮೆಗಾವ್ಯಾಟ್‌ಗೆ ಉತ್ಪಾದನೆ ಏರಿಕೆಯಾಗಿತ್ತು. ಬಹುತೇಕ ದುಪ್ಪಟ್ಟಾಗಿತ್ತು ಎಂದು ಸ್ಮರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾಗಿರುವ ಕಲ್ಲಿದ್ದಲಿನ ಗುಣಮಟ್ಟ ಉತ್ತಮವಾಗಿಲ್ಲ. ಅಗತ್ಯ ಗುಣಮಟ್ಟದಲ್ಲಿ ಇಲ್ಲದಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದ್ದು, ಪ್ರತಿದಿನ ಎರಡು ರೇಕುಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಹಂಚಿಕೆಗೆ ಕೋರಿದ್ದೇವೆ. ಇದಲ್ಲದೆ ಕಲ್ಲಿದ್ದಲು ಆಮದು ಮಾಡಲೂ ಸಹ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
ರಾಜ್ಯದ ಸ್ಥಾಪಿತ ಸಾಮರ್ಥ್ಯಕ್ಕೆ ಅನುಸಾರವಾಗಿ ವಿದ್ಯುತ್ ಉತ್ಪಾದನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮುಖ್ಯಮಂತ್ರಿಗಳು ಉಷ್ಣವಿದ್ಯುತ್ ಸ್ಥಾವರಗಳಲ್ಲಿ ತೇವಗೊಂಡ ಕಲ್ಲಿದ್ದಲು ಬಳಕೆ ಮಾಡದಂತೆ ಸೂಚನೆ ನೀಡಿದರು.
ಮುಖ್ಯಮಂತ್ರಿ @siddaramaiah ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
— CM of Karnataka (@CMofKarnataka) September 22, 2023
ಸಭೆಯಲ್ಲಿ ಇಂಧನ ಸಚಿವ @thekjgeorge, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/4Fa4n5mdoj
ನೀರಾವರಿಗೆ ಸೌರ ವಿದ್ಯುತ್ ಪಂಪ್‌ಸೆಟ್‌ಗಳ ಬಳಕೆಯನ್ನು ಉತ್ತೇಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದರಿಂದ ಅಕ್ರಮ ನೀರಾವರಿ ಪಂಪ್‌ಸೆಟ್ ಹಾವಳಿ ಹಾಗೂ ವಿದ್ಯುತ್ ಪ್ರಸರಣ ಸೋರಿಕೆಯನ್ನು ತಡೆಗಟ್ಟಲು ಸಾಧ್ಯ ಎಂಬ ಅಂಶಗಳ ಕುರಿತು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನ ಸೆಳೆದರು.
ಗೃಹ ಜ್ಯೋತಿ ಯೋಜನೆಯಡಿ ಆಗಸ್ಟ್ ತಿಂಗಳಲ್ಲಿ 1.26 ಕೋಟಿ ಗ್ರಾಹಕರಿಗೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 1.35 ಕೋಟಿ ಗ್ರಾಹಕರಿಗೆ ಶೂನ್ಯ ಮೊತ್ತದ ವಿದ್ಯುತ್ ಬಿಲ್ ನೀಡಲಾಗಿದೆ. ಇದಕ್ಕಾಗಿ 1400 ಕೋಟಿ ರೂ. ಒದಗಿಸಲಾಗಿದೆ ಎನ್ನುವ ವಿವರ ನೀಡಿದರು.
ಎಸ್ಕಾಂ ಗಳ ಆರ್ಥಿಕ ಸ್ಥಿತಿಗತಿ ಕುರಿತೂ ಸಹ ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯುತ್ ಸೋರಿಕೆ ಕುರಿತಂತೆ ರಾಜ್ಯದ ಎಲ್ಲ ಎಸ್ಕಾಂ ಗಳೂ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು. ಅಂತೆಯೇ ಅಗತ್ಯವಿರುವಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಹಾಗೂ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ಪ್ರಸಕ್ತ ವರ್ಷದಲ್ಲಿ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗಾಗಿ 2500 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ಪ್ರಸಕ್ತ ವಿದ್ಯುತ್ ಪರಿಸ್ಥಿತಿ ಕುರಿತು ಹಾಗೂ ಆರ್ಥಿಕ ಸ್ಥಿತಿಗತಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದು ಸೂಕ್ತ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಆರ್ಥಿಕ ಇಲಾಖೆ ಕಾರ್ಯದರ್ಶಿ (ವೆಚ್ಚ) ಡಾ. ಎಂ.ಟಿ. ರೇಜು ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.