Karnataka Chief Minister Siddaramaiah | We welcome the protest in the interest of the state
ಬೆಂಗಳೂರು:
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ಅನಿಸಿಕೆಯಾಗಿದೆ. ಇಂದು ಸಂಜೆ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಹೋರಾಟಗಾರರ ನಿಯೋಗಕ್ಕೆ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ಇಂದು ನಡೆದ ಮಹತ್ವದ ಸಭೆಯಲ್ಲಿ ಅವರು ಪ್ರತಿಕ್ರಿಯಿಸಿದರು.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಎರಡು ಸಮಿತಿಗಳು ಪರಿಸ್ಥಿತಿ ಅವಲೋಕನ ಮಾಡಿ ಆದೇಶ ನೀಡುತ್ತವೆ. ಬಿಳಿಗುಂಡ್ಲುವಿನಲ್ಲಿ ನೀರು ಬಿಡಬೇಕೆಂದು ಆದೇಶವಾಗಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿ ಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ 284. 85 ಟಿಎಂಸಿ ನೀರು ಅಗತ್ಯವಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಂಕಷ್ಟ ಸೂತ್ರ ಸಿದ್ಧಪಡಿಸಿಲ್ಲ. 2 ಸಮಿತಿಗಳಾಗಬೇಕೆಂದು ನ್ಯಾಯಮಂಡಳಿಯೇ ತೀರ್ಮಾನ ಮಾಡಿದೆ ಎಂದು ವಿವರಿಸಿದರು.
ಈ ವರ್ಷ ಆಗಸ್ಟ್ ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಯಿತು. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ಈವರೆಗೆ 43 ಟಿಎಂಸಿ ನೀರು ಹೋಗಿದೆ. 123 ಟಿಎಂಸಿ ನೀರು ಬಿಡಬೇಕು ಎಂದು ಆದೇಶವಾಗಿದೆ. ಆದರೆ ನಾವು ನೀರು ಬಿಟ್ಟಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಾವು ಪ್ರತಿಭಟಿಸುತ್ತಲೇ ಬಂದಿದ್ದೇವೆ. ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿದ್ದೆವು. ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ನೀರಾವರಿಗೆ ಅಗತ್ಯವಿದೆ. 30 ಟಿ ಎಂಸಿ ಕುಡಿಯುವ ನೀರಿಗೆ ಅಗತ್ಯ. ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯ. ಒಟ್ಟು 106 ಟಿಎಂಸಿ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರು ಎಂದು ವಿವರಿಸಿದರು.
ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ @siddaramaiah ಅವರ ಮಾತುಗಳು.
— CM of Karnataka (@CMofKarnataka) September 29, 2023
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ನಿಲುವು. ಇಂದು ಸಂಜೆ ಕಾನೂನು ಮತ್ತು… pic.twitter.com/eC8rM1MnOz
ಸಭೆಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್ ಅವರು ಕರ್ನಾಟಕದ ಜನರಿಗೆ ಪೆಟ್ಟು ಬೀಳುವ ಆದೇಶ ಬೀಳುತ್ತಿದೆ. ಜನ ಆತಂಕಗೊಂಡಿದ್ದಾರೆ. ರೈತರ ಪರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆಗಳು ಜನಪರವಾಗಿ ಹೋರಾಟ ಮಾಡಿದಾಗ ಅವರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು. ಮೇಕೆದಾಟು ಯೋಜನೆಗೆ ಶೀಘ್ರ ಕಾಯಕಲ್ಪ ನೀಡಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಪ್ರಾಧಿಕಾರದ ತೀರ್ಪು ಅವೈಜ್ಞಾನಿಕವಾಗಿದೆ. ಲೋಪ ಎಲ್ಲಿ ಆಗಿದೆ ಎಂದು ಸ್ಪಷ್ಟಪಡಿಸಬೇಕು. ನಮ್ಮ ಹಕ್ಕೊತ್ತಾಯವನ್ನು ತಮಿಳುನಾಡಿನಂತೆಯೇ ತೀವ್ರವಾಗಿ ಮಾಡಬೇಕು. ಸಂಕಷ್ಟ ಪರಿಹಾರ ಸೂತ್ರ ಇಲ್ಲದಿದ್ದರೂ ನೀರು ಬಿಡುವಂತೆ ಸೂಚಿಸುವುದು ತಪ್ಪು. ಆದೇಶ ಉಲ್ಲಂಘನೆ ಮಾಡಿದರೆ ಏನಾಗುತ್ತದೆ ಎಂದು ಪಟ್ಟಿ ಮಾಡಬೇಕು ಎಂದು ಹೇಳಿದರು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ತಮಿಳುನಾಡು ಬೆಳೆಗೆ ನೀರು ಕೇಳುತ್ತಿದೆ. ತಕ್ಷಣ ಸದನ ಕರೆದು ಈ ಕುರಿತು ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಸಂಜೆ ತಜ್ಞರ ತಂಡದ ಜತೆಗೂ ರ್ಚಿಸಲಾಗುವುದು. ಬಳಿಕ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಿಯೋಗದಲ್ಲಿ ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
