ಬೆಂಗಳೂರು:
ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪದತ್ಯಾಗದ ಸುಳಿವು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ನೀಡುವ ಸೂಚನೆ ಮೇರೆಗೆ ಜುಲೈ 26ರ ನಂತರ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ, ಜುಲೈ 25ಕ್ಕೆ ಹೈಕಮಾಂಡ್ ನಿಂದ ಸೂಚನೆ ಬರುತ್ತದೆ, ಅದರಂತೆ ನಡೆದುಕೊಳ್ಳುತ್ತೇನೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದಿನ ಎರಡು ವರ್ಷ ಪಕ್ಷಕ್ಕಾಗಿ ಸಾಕಷ್ಟು ದುಡಿದು ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಕೇಂದ್ರ ನಾಯಕರಾದ ಅಮಿತ್ ಶಾ, ಜೆ ಪಿ ನಡ್ಡಾ ಅವರು ನನ್ನ ಬಗ್ಗೆ ವಿಶೇಷವಾದ ಪ್ರೀತಿ, ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ನೀಡದಿರುವ ನಿಯಮ ಬಿಜೆಪಿಯಲ್ಲಿದೆ, ಅದರಂತೆ ಯಾರಿಗೂ ಸ್ಥಾನಮಾನ ಕೊಟ್ಟಿಲ್ಲ, ಆದರೆ ನನಗೆ 78 ವರ್ಷವಾದರೂ ಬಿಜೆಪಿಯಲ್ಲಿ ನನ್ನ ಕೆಲಸವನ್ನು ಮೆಚ್ಚಿ ವರಿಷ್ಠರು ನನಗೆ ಎಲ್ಲ ಸ್ಥಾನಮಾನವನ್ನು ಕೊಟ್ಟಿದ್ದಾರೆ.
ಜುಲೈ 26ಕ್ಕೆ ನಾನು ಮುಖ್ಯಮಂತ್ರಿಯಾಗಿ ಎರಡು ವರ್ಷಗಳಾಗುತ್ತದೆ. ಮುಂದಿನ ವರ್ಷಗಳಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೆ ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಮತ್ತು ಸಂಕಲ್ಪ, ಅದೇ ಸಂಕಲ್ಪವನ್ನು ಈಗಲೂ ಮುಂದೆಯೂ ಹೊಂದಿರುತ್ತೇನೆ. ರಾಷ್ಟ್ರೀಯ ನಾಯಕರು ಜುಲೈ 25ಕ್ಕೆ ನೀಡುವ ಸೂಚನೆ ಮೇರೆಗೆ 26ನೇ ತಾರೀಖಿನಿಂದ ನನ್ನ ಕೆಲಸವನ್ನು ಪ್ರಾರಂಭ ಮಾಡುತ್ತೇನೆ ಎಂದು ಹೇಳಿದ್ದಾರೆ.