Home ಬೆಂಗಳೂರು ನಗರ ಮುದಲಿಯಾರ್ ಸೇವಾ ಸಂಘ ವಜ್ರ ಮಹೋತ್ಸವ ಉದ್ಘಾಟನೆ

ಮುದಲಿಯಾರ್ ಸೇವಾ ಸಂಘ ವಜ್ರ ಮಹೋತ್ಸವ ಉದ್ಘಾಟನೆ

79
0
Karnataka CM calls on Mudaliar community to open educational institutions and contribute to the field of education

ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುದಲಿಯಾರ್ ಸಮುದಾಯಕ್ಕೆ ಸಿಎಂ ಕರೆ

ಬೆಂಗಳೂರು:

ಮುದಲಿಯಾರ್ ಸಮುದಾಯ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಅವರು ಇಂದು ಬೆಂಗಳೂರಿನ ಪ್ರಕಾಶನಗರದಲ್ಲಿ ಮುದಲಿಯಾರ್ ಸೇವಾ ಸಂಘದ ವಜ್ರ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಮುದಲಿಯಾರ್ ಸಮುದಾಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಬೇಕು. ನಗರಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿಗೆ ಇದ್ದು, ಶಾಲೆಗಳ ಸಂಖ್ಯೆ ಕಡಿಮೆ ಇರುವ ಜೊತೆಗೆ ಖಾಸಗಿ ಶಾಲೆಗಳಲ್ಲಿ ಬಹಳಷ್ಟು ಫೀಸ್ ಕೇಳಲಾಗುತ್ತಿದೆ. ಬೆಂಗಳೂರಿನ ಬಡಜನ, ಮಧ್ಯಮ ವರ್ಗದ ಜನರಿಗೆ ಶಿಕ್ಷಣದಲ್ಲಿ ಪರಿಹಾರ ನೀಡಬೇಕಾಗಿದೆ. ಇಂತಹ ಸಮುದಾಯಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮುಂದೆ ಬಂದಲ್ಲಿ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುವುದು. ಇಂತಹ ಸಂಘಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ, ಮೌಲಿಕ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಸಮಾಜದಲ್ಲಿ ಬದಲವಾವಣೆ ತರಲು ಸಾಮಾಜಿಕ ಹೊಣೆಗಾರಿಕೆಯುಳ್ಳ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ. ಬೆಂಗಳೂರಿನಲ್ಲಿ ಎಲ್ಲ ಸಂಘಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಬೇಕು ಎಂದರು.

ನಾಡು ಕಟ್ಟುವ ಕಾಯಕದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ:

ನಾಡು ಕಟ್ಟಲು ಸಮುದಾಯದ ಮಾರ್ಗದರ್ಶನ ಹಾಗೂ ಸೇವೆ ಅವಶ್ಯಕತೆ ಇದ್ದು, ನಾಡು ಕಟ್ಟುವ ಕಾಯಕದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಮುಖ್ಯಮಂತ್ರಿಗಳು ಕರೆ ನೀಡಿದರು. ಆಧುನಿಕ ಕಾಲಘಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಶಿಕ್ಷಣಕ್ಕೆ ಇಂಬು ನೀಡಲಾಗಿದೆ. ಶಾಸಕರಾದ ಸುರೇಶ್ ಕುಮಾರ್ ರವರು ಶಿಕ್ಷಣ ಸಚಿವರಾಗಿದ್ದಾಗ ರಾಜ್ಯದಲ್ಲಿ ಸರ್ವ ಶಿಕ್ಷಣ ಅಭಿಯಾನ ಯಶಸ್ವಿಯಾಗಿ ನಡೆಯಿತು. ಈ ವರ್ಷ ರಾಜ್ಯಾದ್ಯಂತ 6500 ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಯೋಜನೆ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಶಕ್ತಿಯನ್ನು ತುಂಬುವ ಕ್ರಾಂತಿಕಾರಿ ಹೆಜ್ಜೆಯಾಗಲಿದೆ ಎಂದರು.

ಕಠಿಣ ಪರಿಶ್ರಮ, ವೈಜ್ಞಾನಿಕ ಚಿಂತನೆಯಿರುವ ಸಮುದಾಯ:

ಮುದಲಿಯಾರ್ ಸಮುದಾಯ ಅತ್ಯಂತ ಪ್ರಮುಖ ದಕ್ಷಿಣ ಭಾರತದ ಸಮುದಾಯ. ಕಠಿಣ ಪರಿಶ್ರಮ, ವೈಜ್ಞಾನಿಕ ಚಿಂತನೆ ಮಾಡುವ ಬುದ್ಧಿವಂತಿಕೆಯ ಪ್ರವೃತ್ತಿಯಿಂದ ಅವರು ಯಶ್ವಸಿಯಾಗಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿನ ಆಡಳಿತಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದವರು. ಆದ್ದರಿಂದ ರಾಜ್ಯದ ಅಭಿವೃದ್ಧಿ ಯೋಜನೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.

ಬೆಂಗಳೂರು ನಿರ್ಮಾಣದಲ್ಲಿ ಮುದಲಿಯಾರ್ ಸಮುದಾಯದ ಐತಿಹಾಸಿಕ ಕೊಡುಗೆ :

ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅರ್ಕಾಟ್ ನಾರಾಯಣಸ್ವಾಮಿ ಅವರು ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಹೈಕೋರ್ಟ್ ಅಠಾರ ಕಚೇರಿಕಟ್ಟಡ ಸೇರಿದಂತೆ ಮೈಸೂರು, ಬೆಂಗಳೂರಿನ ಪ್ರಮುಖ ಕಟ್ಟಡಗಳ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವದ್ದು.ಬಿ.ಆರ್.ಮಾಣಿಕಂ ಮುದಲಿಯಾರ್ ವಿಧಾನಸೌಧ, ವಾಣಿವಿಲಾಸ ಆಸ್ಪತ್ರೆ, ರಸೆಲ್ ಮಾರುಕಟ್ಟೆ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದ್ದರು.

ಬೆಂಗಳೂರಿನ ನಿರ್ಮಾಣದಲ್ಲಿ ಮುದಲಿಯಾರ್ ಸಮುದಾಯ ಐತಿಹಾಸಿಕ ಕೆಲಸ ಮಾಡಿದೆ. ಅರುಣಾಚಲಂ. ಲಕ್ಷ್ಮಣ ಸ್ವಾಮಿ ಶಿಕ್ಷಣ ಕ್ಷೇತ್ರ ಸೇರಿದಂತೆ ಸಮುದಾಯದವರು ಹಲವಾರು ರಂಗದ ಅಭಿವೃದ್ಧಿಗೆ ಶ್ರಮ ವಹಿಸಿದ್ದಾರೆ. ಇಂತಹ ಪರಂಪರೆಯಿರುವ ಸಮುದಾಯ ನಮ್ಮ ನಾಡಿಗೆ ಆಸ್ತಿ. ವೃತ್ತಿಯಲ್ಲಿ ಹಾಗೂ ದುಡಿಮೆಯಲ್ಲಿ ನಂಬಿಕೆಯಿಟ್ಟಿರುವ ಸಮುದಾಯಗಳಿಗೆ ಬಡತನ ಬರುವುದಿಲ್ಲ. ವಜ್ರ ಮಹೋತ್ಸವ ಆಚರಣೆಗೆ ಅಭಿನಂದನೆಗಳು.ವಿದ್ಯಾ ಸಂಸ್ಥೆಗಳು, ಯುಪಿಎಸ್ ಸಿ ಪರೀಕ್ಷೆ ತರಬೇತಿ ಕೋರ್ಸುಗಳು, ಬಡ ವಿದ್ಯಾರ್ಥಿಗಳಿಗೆ ಸಹಾಯ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಶಿಬಿರಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here