Home ಬೆಂಗಳೂರು ನಗರ ಬೆಂಗಳೂರು ಅಭಿವೃದ್ಧಿ ಅಪ್‌ಡೇಟ್‌ಗಳನ್ನು ಪ್ರತಿದಿನ ಪರಿಶೀಲಿಸಲಾಗುವುದು: ಮುಖ್ಯಮಂತ್ರಿ ಘೋಷಣೆ

ಬೆಂಗಳೂರು ಅಭಿವೃದ್ಧಿ ಅಪ್‌ಡೇಟ್‌ಗಳನ್ನು ಪ್ರತಿದಿನ ಪರಿಶೀಲಿಸಲಾಗುವುದು: ಮುಖ್ಯಮಂತ್ರಿ ಘೋಷಣೆ

61
0

ಬೆಂಗಳೂರು:

ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ನಿಲ್ದಾದಣದವರೆಗೆ 7.5 ಕಿ.ಮೀ ಉದ್ದದ ಮೆಟ್ರೋ ನೇರಳೆ ಮಾರ್ಗಕ್ಕೆ ಕೇಂದ್ರ ವಸತಿ, ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ ಮುಖ್ಯಮಂತಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರನ್ನು ನಿಜವಾದ ಅಂತರರಾಷ್ಟ್ರೀಯ ಕೇಂದ್ರವನ್ನಾಗಿಸಲು ಸರ್ಕಾರ ಸರ್ವ ಪ್ರಯತ್ನ ಮಾಡಲಿದೆ. ಮೆಟ್ರೋ ಇನ್ನಷ್ಟು ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಬೇಕು. ಒಟ್ಟು 317 ಕಿ.ಮೀ ಉದ್ದದ ಮಾರ್ಗ ನಿರ್ಮಾಣ ಗುರಿ ಇದೆ ಎಂದರು.

ಡ್ಯಾಷ್ ಬೋರ್ಡ್

ಮುಖ್ಯಮಂತ್ರಿ ಕಚೇರಿಯ ಡ್ಯಾಷ್ ಬೋರ್ಡ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ 20 ದಿನಗಳಲ್ಲಿ ಡ್ಯಾಷ್‌ಬೋರ್ಡ್ ಸಿದ್ಧಪಡಿಸಲಾಗುವುದು. ಪ್ರತಿದಿನದ ಅಪ್‌ಡೇಟ್‌ಗಳನ್ನು ಪರಿಶೀಲಿಸಲಾಗುವುದು ಹಾಗೂ ದಿನದ ಮೊದಲ ಗಂಟೆಯನ್ನು ಬೆಂಗಳೂರಿನ ಮೆಗಾ ಯೋಜನೆಗಳಾದ ಮೆಟ್ರೋ, ಹೊರ ವರ್ತುಲ ರಸ್ತೆ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೈ ಸ್ಪೀಡ್ ರೈಲು ಮತ್ತು ರಸ್ತೆ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಮೀಸಲಿರಿಸಲಾಗುವುದು ಎಂದರು.

ಇಂದು ನಗರದ ಪ್ರಮುಖ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಾಗಿದೆ. ಜನಸಂದಣಿ ಹೆಚ್ಚಿರುವ ಕಡೆ ಮೆಟ್ರೋ ಸೌಲಭ್ಯವ ಕಲ್ಪಿಸಲಾಗಿದೆ. ದೂರದ ಪ್ರದೇಶಗಳಿಗೆ ಅತ್ಯಲ್ಪ ಸಮಯದಲ್ಲಿ ತಲುಪಲು ಮೆಟ್ರೋದಿಂದ ಸಾಧ್ಯ. ಈ 7.5ಕಿ.ಮೀ ಮಾರ್ಗದಲ್ಲಿ ಅತ್ಯಂತ ಹೆಚ್ಚು ಜನಸಂದಣಿ ಇದೆ.‌ ಹೀಗಾಗಿ ಈ ಭಾಗದ ಬಹಳಷ್ಟು ಜನರಿಗೆ ಮೆಟ್ರೋ ರೈಲು ಉಪಯುಕ್ತವಾಗಲಿದೆ. ಇದನ್ನು ಕಾರ್ಯಗತ ಮಾಡಿರುವ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಸಿಎಂ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ನಗರ. ಯಾವುದೇ ಅಂತರರಾಷ್ಟ್ರೀಯ ನಗರ ಮೆಟ್ರೋ ಇಲ್ಲದೆ ಅಪೂರ್ಣ. ಮೆಟ್ರೋ ಬೆಂಗಳೂರಿನ ಜೀವನಾಡಿ ಮಾತ್ರವಲ್ಲ ಬೆಂಗಳೂರಿನ ಭವಿಷ್ಯ ರೇಖೆಯೂ ಆಗಬೇಕು ಎಂದರು. ಜನರಿಗೆ ಸಂಪರ್ಕ ವ್ಯವಸ್ಥೆ ಹಾಗೂ ಸುಖಕರ ಪ್ರಯಾಣ ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರದಲ್ಲಿ ಅವಶ್ಯಕ ವಾಗಿದೆ‌.‌ ವಿದೇಶಿ ಗಣ್ಯರು, ವಿಜ್ಞಾನಿಗಳು ಭೇಟಿ ನೀಡುವ ಕೇಂದ್ರ ಬೆಂಗಳೂರು. ಹೀಗಾಗಿ ಕಾಲ ಮಿತಿಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮುಖ್ಯ. ಅದರ ಜತೆ ಯೋಜನೆಗಳಲ್ಲಿ ಉತ್ತರದಾಯಿತ್ವ ಅತಿ ಮುಖ್ಯ ಎಂದು ತಿಳಿಸಿದರು.

ಬೆಂಗಳೂರು ವಿಮಾನ ನಿಲ್ದಾಣ ವಿಶ್ವದಲ್ಲಿಯೇ ವಿಶಿಷ್ಟ ವಿಮಾನ ನಿಲ್ದಾಣ. ಮುಂಬರುವ ದಿನಗಳಲ್ಲಿ, ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಒದಗಿಸಲಾಗುವುದು. ಮೂರು ವಿಧದ ಸಂಪರ್ಕವನ್ನು ಒದಗಿಸಲಾಗುವುದು. ಈ ಕನಸನ್ನು ನನಸಾಗಿಸುವತ್ತ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ನಾವು ಮಾಡುತ್ತಿದ್ದೇವೆ ಎಂದರು. ನಗರದಲ್ಲಿ ದುಡಿಯುವ ವರ್ಗ ಬಹಳ ದೊಡ್ಡದಿದೆ. ಅವರ ಅಭಿವೃದ್ಧಿಯನ್ನೂ ಗಮನದಲ್ಲಿರಿಸಿಕೊಂಡಿದ್ದೇವೆ. 75 ಕೊಳಗೇರಿಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡುವುದಾಗಿ 75 ನೇ ಸ್ವಾತಂತ್ರ್ಯೋತ್ಸವ ದಿನದಂದು ಘೋಷಿಸಲಾಗಿದೆ. ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ವಿಶೇಷ ಕಾರ್ಯಕ್ರಮ, ಬೆಂಗಳೂರು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ 12 ಹೆಚ್ಚು ರಸ್ತೆಗಳನ್ನು ಗುರುತಿಸಿ ಅಡೆತಡೆ ಇಲ್ಲದೆ ವಾಹನ ಸಂಚಾರ, ಕೃತಕ ಬುದ್ದಿಮತ್ತೆ ಬಳಕೆಯಿಂದ ಸಿಗ್ನಲ್ ವ್ಯವಸ್ಥೆಗೆ ಕ್ರಮ ಜರುಗಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಾಜಪೇಯಿ ಸ್ಮರಣೆ

ಬೆಂಗಳೂರು ಮೆಟ್ರೋ ಯೋಜನೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅನುಮೋದನೆ ನೀಡಿದ್ದರು. ಅವರ ಸಹಾಯವನ್ನು ನಾವು ಮರೆಯಬಾರದು. ಅವರು ದೂರದೃಷ್ಟಿಯನ್ನು ಹೊಂದಿದ್ದರು ಎಂದು ಸಿಎಂ ವಾಜಪೇಯಿ ಅವರನ್ನು ಸಿಎಂ ಸ್ಮರಿಸಿದರು.

2024ಕ್ಕೆ ಮೆಟ್ರೋ ಕೆಲಸ ಪೂರ್ಣ

ಎರಡನೇ ಹಂತದ ಮೆಟ್ರೋ ಯೋಜನೆಯ ಕಾಮಗಾರಿ 2025 ಕ್ಕೆ ಮುಗಿಯಲಿದೆ. ಆದರೆ ಆ ಕಾಮಗಾರಿಯನ್ನು 2024 ಕ್ಕೆ ಮುಗಿಸುವಂತೆ ಸೂಚಿಸಿದ್ದೇನೆ. ಏಕೆಂದರೆ ಇತ್ತೀಚೆಗಿನ ನವದೆಹಲಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಯೋಜನೆಗೆ ಹಣಕಾಸಿನ ತೊಂದರೆ ಆಗುವುದಿಲ್ಲ. ಆದರೆ ಕೆಲಸದ ವೇಗವನ್ನು ಹೆಚ್ವಿಸಿ ಎಂದು ಸೂಚಿಸಿದ್ದಾರೆ. ಹೀಗಾಗಿ ಕಷ್ಟ ಪಟ್ಟು ಕೆಲಸ ಮಾಡಿ. ಆಗ ಕಷ್ಟ ಕಡಿಮೆ ಆಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ಕಿವಿಮಾತು ಹೇಳಿದರು.

ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ವಿ.ಮುನಿರತ್ನ, ಎಂ.ಟಿ.ಬಿ. ನಾಗರಾಜ್ ಕೆ.ಗೋಪಾಲಯ್ಯ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here