ಬೆಂಗಳೂರು:
‘ಇನ್ನು ನೂರು ವರ್ಷ ಕಳೆದರೂ ತಮಿಳುನಾಡು ಮೇಕೆದಾಟು ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇದೆ ಎನ್ನುವ ಬಿಜೆಪಿ ಕೇಂದ್ರದಲ್ಲಿ ತಮ್ಮ ಅಧಿಕಾರ ಬಳಸಿ, ಅಗತ್ಯ ಅನುಮತಿ ಪಡೆದು ಈ ಯೋಜನೆಗೆ ನಾಳೆಯೇ ಭೂಮಿ ಪೂಜೆ ಮಾಡಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ಸರ್ಕಾರದ ಜತೆಗೆ ನಾವೆಲ್ಲರೂ ನಿಲ್ಲುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಮೇಕೆದಾಟು ಯೋಜನೆಗೆ ಅಡ್ಡಿ ಮಾಡುವುದು ತಮಿಳುನಾಡಿನ ಎಲ್ಲ ಪಕ್ಷಗಳ ಅಜೆಂಡಾ. ಇನ್ನೂ ನೂರು ವರ್ಷವಾದರೂ ಅವರ ರಾಜಕೀಯ ಅಜೆಂಡಾ ಇದೇ ಆಗಿರುತ್ತದೆ. ಮೇಕೆದಾಟು ಯೋಜನೆ ಮಾಡಲು ಯಡಿಯೂರಪ್ಪನವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಈಗ ಕೇಂದ್ರ ಪರಿಸರ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂಬ ಮಾಹಿತಿ ಇದೆ.
ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ಯಾವುದೇ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ. ಮೇಕೆದಾಟು ಯೋಜನೆ ನನ್ನ ಕ್ಷೇತ್ರದಲ್ಲೇ ಬರಲಿದ್ದು, ಇದು ಕೇವಲ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ. ನನ್ನ ಕ್ಷೇತ್ರದ ಹತ್ತು ಎಕರೆಗೂ ಈ ನೀರು ಬಳಸಿಕೊಳ್ಳುವುದಿಲ್ಲ. ಈ ಯೋಜನೆಗೆ ಸುಮಾರು 500 ರಿಂದ 1000 ಎಕರೆಯಷ್ಟು ರೆವಿನ್ಯೂ ಜಾಗ ಹೋಗಬಹುದು. ಯಾವ ಪ್ರದೇಶವೂ ಮುಳುಗಡೆಯಾಗುವ ಭೀತಿ ಇಲ್ಲ. ಹೀಗಾಗಿ ಇದು ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ.
ತಮಿಳುನಾಡಿನವರು ರಾಜಕಾರಣ ಮಾಡುತ್ತಿದ್ದಾರೆ. ಡಿಎಂಕೆ ಆಗಲಿ, ಅಣ್ಣಾಡಿಎಂಕೆ ಆಗಲಿ, ಅವರ ರಾಜಕೀಯ ಅಜೆಂಡಾ ಒಂದೇ. ಆ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ರಾಜ್ಯ ಸರ್ವಪಕ್ಷ ನಿಯೋಗ ಯಾಕೆ ಕೊಂಡೊಯ್ಯಬೇಕು? ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರವಾಗಿ ನಿಲ್ಲುತ್ತೇವೆ.
ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆಯೇ ಟೆಂಡರೆ ಕರೆದು ಗುದ್ದಲಿ ಪೂಜೆ ಮಾಡಲಿ, ಅವರ ಜತೆ ನಾವು ನಿಲ್ಲುತ್ತೇವೆ. ನಾವು ಯೋಜನೆ ಮಾಡುತ್ತಿರುವವರು, ಹೀಗಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ. ತಮಿಳುನಾಡಿನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿ, ಏನಾದರೂ ಮಾಡಿಕೊಳ್ಳಲಿ. ಇದರಲ್ಲಿ ನಾವು ಒತ್ತಡ ಹೇರುವ ಅವಶ್ಯಕತೆ ಏನಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು ಅಷ್ಟೇ. ಬಿಜೆಪಿಯದು ಡಬಲ್ ಇಂಜಿನ್ ಸರ್ಕಾರ ಅಂತಾರೆ, ಈ ಯೋಜನೆಗೆ ಅಗತ್ಯ ಅನುಮತಿ ಪಡೆಯಲು ತೊಂದರೆ ಏನು?.
ರಾಜ್ಯ ಸರ್ಕಾರ ಕೋವಿಡ್ ವಿಚಾರದಿಂದ ಹಿಡಿದು ಜಿಎಸ್ಟಿ ವರೆಗೂ ಯಾವ ವಿಚಾರದಲ್ಲೂ ಸರ್ವಪಕ್ಷ ನಿಯೋಗ ಕರೆದೊಯ್ದಿಲ್ಲ. ಸರ್ಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡಿಕೊಂಡಿದ್ದಾರೆ. ಈಗ ಸರ್ವಪಕ್ಷ ನಿಯೋಗ ಏಕೆ ಬೇಕು? ನೀವು ಯೋಜನೆ ಆರಂಭಿಸಿ, ನಿಮ್ಮ ಜತೆ ನಾವು ನಿಲ್ಲುತ್ತೇವೆ ಎಂದು ಸರ್ಕಾರಕ್ಕೆ ಹೇಳುತ್ತಿದ್ದೇವೆ. ಮುಖ್ಯಮಂತ್ರಿಗಳು ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು. ಅದರ ಅಗತ್ಯ ಏನಿತ್ತು? ನಾವು ಸರ್ಕಾರದ ಪರವಾಗಿ ಪತ್ರ ಬರೆದಾಗ ಅವರು ಏನು ಮಾಡಿದ್ದರು? ದೆಹಲಿಯಲ್ಲಿ ನಿಮ್ಮದೇ ಸರಕಾರವಿದೆ, ನಿಮ್ಮದೇ ಅಧಿಕಾರವಿದೆ, ಅದನ್ನು ಬಳಸಿಕೊಂಡು ಯೋಜನೆ ಮಾಡಿ. ನಮ್ಮ ನಡುವೆ ರಾಜಕೀಯವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಈ ವಿಚಾರದಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.
ಇವರ ನಡಾವಳಿ ನೋಡಿದರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಎರಡೂ ಇಂಜಿನ್ ಗಳು ಫೇಲ್ ಆಗಿವೆ. ಈ ಇಂಜಿನ್ ಓಡಲು ಪೆಟ್ರೋಲ್, ಡೀಸೆಲ್ ಇಲ್ಲವಾಗಿದೆ.