ಪ್ರಸಕ್ತ ವರ್ಷ ೧೫ ಕೋಟಿ ನೆರವು
ಬೆಂಗಳೂರು:
ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ ಪಡೆಯ ಬಲವನ್ನು ಹೆಚ್ಚಿಸಲಾಗುವುದು. ಅದರಜೊತೆಗೆ ಪ್ರಸಕ್ತ ವರ್ಷದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ವಾಹನ, ಅತ್ಯಾಧುನಿಕ ಉಪಕರಣ ಖರೀದಿಯ ಜೊತೆಗೆ ರಾಜ್ಯದ ಎರಡು ಕಡೆ ಎಸ್ ಡಿ ಆರ್ ಎಫ್ ತಂಡದ ಕಚೇರಿಯನ್ನು ಸ್ಥಾಪಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯ ಅಗ್ನಿಶಾಮಕ ತುರ್ತು ಸೇವೆ ಗೃಹರಕ್ಷಕ ಪೌರರಕ್ಷಣೆ SDRF ನಿರ್ದೇಶನಾಲಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾದ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ sdrf ಗೆ ಬಲ ನೀಡುವ ಕೆಲಸವನ್ನು ಮುಂದುವರಿಸುತ್ತದೆ. ಕಳೆದ ವರ್ಷ 100 ಜನ ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಕ ಮಾಡಿ ಕೊಳ್ಳಲಾಗಿದೆ. ಪ್ರಸಕ್ತ ವರ್ಷ ಮತ್ತೆ ನೂರು ಜನ ನಿವೃತ್ತ ಮಿಲಿಟರಿ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಆದೇಶಿಸಲಾಗಿದೆ. ದಾವಣಗೆರೆ ಹುಬ್ಬಳ್ಳಿ -ಧಾರವಾಡ ಮತ್ತು ಬೆಳಗಾವಿ ನಡುವೆ 2 ಎಸ್ ಡಿ ಆರ್ ಎಫ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುವುದು. ಬೆಳಗಾವಿಯಲ್ಲಿ ಇತ್ತೀಚೆಗೆ ಪದೇಪದೇ ಪ್ರವಾಹ ಉಂಟಾಗುತ್ತದೆ. ಅದನ್ನು ನಿವಾರಣೆ ಮಾಡಲು ಎಸ್ ಡಿ ಆರ್ ಎಫ್ ಪೂರ್ಣಪ್ರಮಾಣದ ತಂಡ ಆ ಭಾಗದಲ್ಲಿ ಇರಬೇಕಾಗುತ್ತದೆ ಎಂದರು.
ಪ್ರಕೃತಿ ವಿಕೋಪ ಎದುರಿಸಲು ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಾಗಿತ್ತು. ಅದರಡಿ ಅತ್ಯಾಧುನಿಕ ಉಪಕರಣಗಳನ್ನು ಹಾಗೂ ವಾಹನಗಳನ್ನು ಖರೀದಿ ಮಾಡಲಾಗಿದೆ. ಅದೇ ರೀತಿ ಈ ವರ್ಷ ಕೂಡ ೧೫ ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಟೌಟೆ ಚಂಡಮಾರುತ ಕ್ಕೆ ಉಡುಪಿ ಜಿಲ್ಲೆಯ ೩೪ ಮನೆಗಳು ತುತ್ತಾಗಿವೆ. ಸುರತ್ಕಲ್ ಬಳಿ ಸಮುದ್ರದಲ್ಲಿ ೮ ಜನ ಚಂಡ ಮಾರುತಕ್ಕೆ ಸಿಲುಕಿ ಕಾಣೆಯಾಗಿದ್ದಾರೆ. ಅವರ ಪೈಕಿ ಇಬ್ಬರನ್ನು ಪತ್ತೆ ಮಾಡಲಾಗಿದೆ. ಉಳಿದವರ ಪತ್ತೆ ಕೆಲಸ ಮುಂದುವರಿದಿದೆ. ಒಟ್ಟು ೧ ಸಾವಿರ ಅನುಭವಿ ಸಿಬ್ಬಂದಿ ಚಂಡಮಾರುತ ಎದುರಿಸಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದರು.
ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯದ ನಿರ್ದೇಶಕ ಅಮರ್ ಕುಮಾರ್ ಪಾಂಡೆ, ಎಡಿಜಿಪಿ ಸುಣಿಲ್ ಅಗರ್ವಾಲ್, ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.