ಬೆಂಗಳೂರು:
ರಾಜ್ಯದಲ್ಲಿ ಕಳೆದ 10 ವರ್ಷಗಳ ಬಳಿಕ ತೀವ್ರ ಬರ ಎದುರಾಗಿದ್ದು ರಾಜ್ಯಾದ್ಯಂತ ಒಟ್ಟು 195 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದು ಶಿಫಾರಸು ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು ಬುಧವಾರ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.
ಸಂಪುಟ ಉಪಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಇವತ್ತು ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತೇವೆ. ಬಳಿಕ 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ಮೊದಲು 113 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆಗೆ ಆದೇಶ ನೀಡಿದ್ದೇವು. 62 ತಾಲೂಕುಗಳಲ್ಲಿ ಬರಕ್ಕೆ ಅರ್ಹ ವಿವರ ಬಂದಿತ್ತು. ಸಚಿವ ಸಂಪುಟದಲ್ಲೂ ವಿಸ್ರೃತ ಚರ್ಚೆಯಾಗಿತ್ತು. ಆಗ 62 ತಾಲೂಕುಗಳು ಮಾತ್ರವಲ್ಲ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ಬರ ಸ್ಥಿತಿ ಇದೆ ಎಂದು ಚರ್ಚೆಯಾಗಿತ್ತು. ಹೀಗಾಗಿ ಉಳಿದ 134 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ಆದೇಶಿಸಿದ್ದೆವು ಎಂದು ತಿಳಿಸಿದರು.
ಇಂದು ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯು 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 13, 2023
ಈ ಬರಪೀಡಿತ ತಾಲೂಕುಗಳ ನಿರ್ವಹಣೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ:
– ಕುಡಿಯುವ ನೀರಿನ ಪೂರೈಕೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು SDRF… pic.twitter.com/TYbxI5Khzi
ಈಗ ಎಲ್ಲ ಜಿಲ್ಲೆಗಳಿಂದ ಬೆಳೆ ಸಮೀಕ್ಷೆ ವರದಿ ಬಂದಿದೆ. 161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ. ಒಟ್ಟು 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಉಳಿದ 40 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದರೂ ಕೂಡ ತೇವಾಂಶ ಕೊರತೆ ಕಂಡು ಬರುತ್ತಿಲ್ಲ. ತನ್ನ ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಬರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡಬಹುದು ಅಥವಾ ಇಲ್ಲದೇ ಇರಬಹುದು ಎಂದು ಹೇಳಿದರು.
ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಕಂಡು ಬಂದಿದ್ದು 34 ತಾಲೂಕುಗಳಲ್ಲಿ ಸಾಧಾರಣ ಬರ ಬಂದಿದೆ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿಯ ಬಗ್ಗೆ ಕೇಂದ್ರಕ್ಕೆ ವರದಿ ಕೊಡುತ್ತೇವೆ. ಮಳೆ ಕೊರತೆಯಿಂದ ಅನ್ನದಾತರ ಸಂಕಷ್ಟಕ್ಕೆ ಸಿಲುಕಿದ್ದು ಕಳೆದ 10 ವರ್ಷಗಳಲ್ಲೇ ಕಂಡು ಕೇಳರಿಯದ ಬರ ಉತ್ತರ, ದಕ್ಷಿಣದಲ್ಲಿ ಕ್ಷಾಮ ಉಂಟಾಗಿದೆ ಎಂದರು.
ಬರ ಸಮೀಕ್ಷೆ ನಡೆಸಿದ ಸಂಪುಟ ಉಪ ಸಮಿತಿ ತಂಡ ಜಿಲ್ಲಾವಾರು ತಾಲ್ಲೂಕುಗಳ ಸಂಖ್ಯೆಯನ್ನು ಬಿಡುಗಡೆಗೊಳಿಸಿದ್ದಾರೆ — ಬಾಗಲಕೋಟೆ-2, ಬೆಳಗಾವಿ-8, ಬೆ.ಗ್ರಾಮೀಣ-3, ಬೆ.ನಗರ-5, ಚಿಕ್ಕಮಗಳೂರು-5, ಚಿತ್ರದುರ್ಗ-4, ಧಾರವಾಡ-3, ಗದಗ-5, ಹಾಸನ-5, ಕಲಬುರಗಿ-9, ಕೊಡಗು-2, ಕೋಲಾರ-5, ತುಮಕೂರು-5, ಉತ್ತರ ಕನ್ನಡ-9, ವಿಜಯಪುರ-10, ಯಾದಗಿರಿ-6, ದಕ್ಷಿಣ ಕನ್ನಡ-2, ಬೀದರ್-1, ಚಾಮರಾಜನಗರ-4,
ದಾವಣಗೆರೆ-3, ಕಲಬುರಗಿ-5, ಕೊಪ್ಪಳ-2, ಮಂಡ್ಯ-5, ರಾಮನಗರ-2, ಉಡುಪಿ-2, ವಿಜಯನಗರದಲ್ಲಿ 4 ತಾಲೂಕುಗಳಲ್ಲಿ ಬರದ ಕ್ಷಾಮ ಎದುರಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.