ಬೆಂಗಳೂರು:
ಮೂರನೇ ಅಲೆ ತಡೆಗಟ್ಟುವ ಹಾಗೂ ಹೆಚ್ಚಾಗಿ ಜನರ ಸಂಪರ್ಕಕ್ಕೆ ಬರುವ ವರ್ತಕರಿಗಾಗಿ ಮಲ್ಲೇಶ್ವರದಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಲಸಿಕೀಕರಣ ಅಭಿಯಾನಕ್ಕೆ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಚಾಲನೆ ನೀಡಿದರು.
ಮಲ್ಲೇಶ್ವರದ 8ನೇ ಕ್ರಾಸ್‌ನಲ್ಲಿರುವ ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರತಿ ವರ್ತಕರಿಗೂ ಲಸಿಕೆ ನೀಡಲಾಗುತ್ತಿದೆ. 1500 ಮಂದಿ ಇಲ್ಲಿ ಸಲಿಕೆ ಪಡೆದರು.
ಈಗಾಗಲೇ ಕ್ಷೇತ್ರದಲ್ಲಿ ಫ್ರಂಟ್‌ಲೈನ್ ವಾರಿಯರುಗಳೆಲ್ಲರಿಗೂ ಲಸಿಕೆ ಹಾಕಲಾಗಿದ್ದು, ಅದರ ಬೆನ್ನಲ್ಲೇ ಆಟೋ ಚಾಲಕರು, ಹಿರಿಯ ನಾಗರೀಕರು, ವೈದ್ಯರು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದವರಿಗೂ ವ್ಯಾಕ್ಸಿನೇಷನ್ ಮಾಡಲಾಗಿದೆ. ಈಗ ವರ್ತಕರಿಗಾಗಿ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, “ಮೂರನೇ ಅಲೆಯಲ್ಲಿ ಸೋಂಕು ಬೇಗ ಬೇಗ ಹರಡುವುದಿದೆ. ಇದನ್ನು ತಡೆಯಲು ಲಸಿಕೆಯೊಂದೇ ರಾಮಬಾಣ. ಆದ್ದರಿಂದ ಕ್ಷೇತ್ರದ ಪ್ರತಿಯೊಬ್ಬರನ್ನೂ ಹುಡುಕಿ ಹುಡುಕಿ ಲಸಿಕೆ ಕೊಡಲಾಗುತ್ತಿದೆ” ಎಂದರು.
ಒಂದು ಕಡೆ ಬಿಬಿಎಂಪಿ ವತಿಯಿಂದ ಲಸಿಕೀಕರಣ ನಡೆಯುತ್ತಿದೆ. ಮತ್ತೊಂದೆಡೆ ಖಾಸಗಿ ಸಂಸ್ಥೆಗಳ ನೆರವಿನಿಂದ ಅಶ್ವತ್ಥನಾರಾಯಣ ಫೌಂಡೇಶನ್ ಇನ್ನೊಂದೆಡೆ ಕ್ಷೇತ್ರದ ಉದ್ದಗಲಕ್ಕೂ ಯಶಸ್ವಿಯಾಗಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು, ಈವರೆಗೆ 60,000ಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಇಂದಿನಿಂದ ವಿವಿಧ ಕ್ಷೇತ್ರಗಳಲ್ಲಿನ 1.25 ಲಕ್ಷ ಜನರಿಗೆ ಲಸಿಕೆ ಕೊಡುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲ ದಿನಗಳಲ್ಲೇ ಮಲ್ಲೇಶ್ವರಂ ಕ್ಷೇತ್ರದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಇವತ್ತು ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದ ಅವರು, ಬೆಂಗಳೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಜನದಟ್ಟಣಿಯುಳ್ಳ ನಗರವಾಗಿದೆ. ಇಲ್ಲಿಂದ ಬೇರೆ ಕಡೆ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಇಡೀ ನಗರದಲ್ಲಿ ಭರದಿಂದ ಲಸಿಕೀಕರಣ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ವಾಸವಿ ಸಂಘದ ಅಧ್ಯಕ್ಷ ಡಾ.ಗೋವಿಂದರಾಜು, ಬಿಜೆಪಿಯ ಕೆಲ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಲ್ಲೇಶ್ವರದಲ್ಲಿ 92% ಲಸಿಕಾಕರಣವಾಗಿದೆ.
— Dr. Ashwathnarayan C. N. (@drashwathcn) July 6, 2021
ಯಾವುದೇ ಆತಂಕವಿಲ್ಲದೆ ಗ್ರಾಹಕರು ಶಾಪಿಂಗ್ ಮಾಡಲು ಸುರಕ್ಷತೆಯ ದೃಷ್ಟಿಯಿಂದ ಆದ್ಯತೆಯಲ್ಲಿ ಅಂಗಡಿ ಮುಂಗಟ್ಟುಗಳ ಮಾಲಿಕರು, ಸಿಬ್ಬಂದಿಗಳಿಗೆ ಲಸಿಕಾಕರಣ ನಡೆಯುತ್ತಿದೆ.
MS ರಾಮಯ್ಯ ಪಾರ್ಕ್, MS ರಾಮಯ್ಯ ಕಾಲೇಜು, ಮಲ್ಲೇಶ್ವರದ ವಾಸವಿ ಹಾಲ್ನ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. pic.twitter.com/xFLkQ98vfO
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ
ಎಂ.ಎಸ್.ರಾಮಯ್ಯ ಆಸ್ಪತ್ರೆ ವತಿಯಿಂದ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೂ ಡಿಸಿಎಂ ಡಾ.ಅಶ್ವತ್ಥನಾರಾಯಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, “ಎಲ್ಲ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುತ್ತುರುವುದು ಉತ್ತಮವಾದ ಕಾರ್ಯ. ಇದಕ್ಕೆ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಶೈಕ್ಷಣಿಕ ವರ್ಷ ನಿರಾಯಾಸವಾಗಿ ನಡೆಯಬೇಕಾದರೆ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲೇಬೇಕು” ಎಂದರು.
ಎಂ.ಎಸ್.ರಾಮಯ್ಯ ಆಸ್ಪತ್ರೆ ಅಧ್ಯಕ್ಷ ಎಂ.ಆರ್.ಜಯರಾಂ ಹಾಗೂ ಸಿಇಒ ಎಂ.ಆರ್.ಶ್ರೀನಿವಾಸ ಮೂರ್ತಿ ಸೇರಿದಂತೆ ವೈದ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ಅದಕ್ಕೂ ಡಿಸಿಎಂ ಅವರು ಎಂಎಸ್‌ಆರ್ ನಗರದಲ್ಲಿ ನಡೆದ ಲಸಿಕೆ ಅಭಿಯಾನಕ್ಕೂ ಚಾಲನೆ ನೀಡಿದರು.