ಬೆಂಗಳೂರು:
ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ಹೆಚ್ಚುವರಿ ಜವಾಬ್ದಾರಿ ನೀಡಿದೆ. 20 ಅಸೆಂಬ್ಲಿ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ವಿಜಯೇಂದ್ರ ಅವರಿಗೆ ವಿಶೇಷವಾದ ಹೆಲಿಕಾಪ್ಟರ್ ವೊಂದನ್ನು ಒದಗಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ವಿಜಯೇಂದ್ರ ಪ್ರಚಾರ ನಡೆಸಲಿದ್ದು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಪ್ರಚಾರ ನಡೆಸುವಂತೆ ಅವರಿಗೆ ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಕೇಸರಿ ಪಕ್ಷ ಪ್ರಕಟಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿಲ್ಲ. ಯಡಿಯೂರಪ್ಪ ಎಲ್ಲಾ ಕಡೆ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಲಿಂಗಾಯತ ಮುಖವಾಗಿ ವಿಜಯೇಂದ್ರ ಅವರನ್ನು ಪ್ರಚಾರದ ಕಣಕ್ಕಿಳಿಸಲು ಬಿಜೆಪಿ ಇದೀಗ ನಿರ್ಧಾರ ತೆಗೆದುಕೊಂಡಿದೆ.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ವಿಜಯೇಂದ್ರ, ಈ ಹಂತದಲ್ಲಿ ತಮಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚಿಂತಸುವುದು ದಡ್ಡತನ. ಬಿಜೆಪಿ ಗೆಲುವು ನನ್ನ ಮೊದಲ ಗುರಿಯಾಗಿದೆ ಎಂದರು. ಪಕ್ಷದಲ್ಲಿ ಯಾವುದೇ ಉನ್ನತ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿಲ್ಲ. ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ನನ್ನ ಸಾಮರ್ಥ್ಯದ ಮೇಲೆ ಭವಿಷ್ಯ ಅವಲಂಬಿಸಿದೆ ಎಂದು ಅವರು ತಿಳಿಸಿದರು.