ಬೆಂಗಳೂರು:
ಮೈಸೂರು ಜಿಲ್ಲೆಯ ಚಾಮುಂಡಿ ರಿಂಗ್ ರಸ್ತೆಯ ಬಳಿ ದಿನಾಂಕ: 24-08-2021ರಂದು ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರವು ಬದ್ದವಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ವಿಧಾನ ಪರಿಷತ್ತಿನ ಸದಸ್ಯರುಗಳಾದ ಎಸ್.ಆರ್. ಪಾಟೀಲ್, ಎಂ. ನಾರಾಯಣಸ್ವಾಮಿ, ಪಿ.ಆರ್. ರಮೇಶ್, ಪ್ರಕಾಶ್ ಕೆ ರಾಠೋಡ್, ಕೆ. ಪ್ರತಾಪ್ ಚಂದ್ರ ಶೆಟ್ಟಿ, ಮರಿತಿಬ್ಬೇಗೌಡ, ಆರ್. ಬಿ. ತಿಮ್ಮಾಪುರ, ಕೆ. ಹರೀಶ್ ಕುಮಾರ್, ಡಾ. ಕೆ. ಗೋವಿಂದರಾಜು, ಎಸ್. ವೀಣಾ ಅಚ್ಚಯ್ಯ, ಕೆ.ಸಿ.ಕೊಂಡಯ್ಯ, ನಸೀರ್ ಅಹ್ಮದ್, ಅರವಿಂದ ಕುಮಾರ್ ಅರಳಿ, ಸಿ.ಎಂ. ಲಿಂಗಪ್ಪ ಹಾಗೂ ಭಾರತಿ ಶೆಟ್ಟಿ ಅವರುಗಳು ನಿಯಮ 68ರಡಿ ಪ್ರಸ್ತಾಪಿಸದ ವಿಷಯಕ್ಕೆ ಉತ್ತರಿಸಿದ ಸಚಿವರು, ಈ ಪ್ರಕರಣದಲ್ಲಿ ಯಾರೇ ಆರೋಪಿಗಳಿದ್ದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.
ಈ ಸಂಬಂಧ ಮೈಸೂರು ಪೊಲೀಸರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಸಹ ಬಂಧಿಸಿದ್ದಾರೆ. ಅಲ್ಲದೆ ಸಂತ್ರಸ್ತ ಯುವತಿಯ ಕುಟುಂಬದವರನ್ನು ಮನವೊಲಿಸಿ ಐ.ಪಿ.ಸಿ ಸೆಕ್ಷನ್ 164ರಡಿ ಸಂತ್ರಸ್ತೆಯಿಂದ ಹೇಳಿಕೆಯನ್ನು ಸಹ ಪಡೆಯಲಾಗಿದೆ ಎಂದು ತಿಳಿಸಿದರು.
ಸಂತ್ರಸ್ತ ಯುವತಿಯ ಹೇಳಿಕೆಯನ್ನು ಪಡೆದು, ವೈಜ್ಞಾನಿಕ ಸಾಕ್ಷ್ಯಾಧಾರಗಳ ಸಹಾಯದಿಂದ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಲಾಗಿದೆ.
Standard Operation Procedure (SOP) ಮಾರ್ಗಸೂಚನೆಗಳ ಮೇಲೆ ಪೊಲೀಸರು ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಐ.ಪಿ.ಸಿ / ಸಿ.ಆರ್.ಪಿ.ಸಿ ಕಾಯ್ದೆಗಳಲ್ಲಿ ಬದಲಾವಣೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಈ ಬಗ್ಗೆ ಕಾನೂನಿನಲ್ಲಿ ಕೆಲವು ನಿಯಮಗಳನ್ನು ಮಾರ್ಪಾಟು ಮಾಡಲು ಲಾ ಕಮಿಷನ್ ಅವರೊಂದಿಗೂ ಚರ್ಚಿಸಲಾಗುವುದು. ಸರ್ಕಾರದ ಮೇಲೆ ವಿಶ್ವಾಸವಿಡುವುದು ಸೂಕ್ತ ಎಂದು ತಿಳಿಸಿದರು.
ಈ ಕೇಸನ್ನು ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಾದ ಮಾಡಲು ಅನುಕೂಲವಾಗುವಂತೆ ಸರ್ಕಾರವು ಉತ್ತಮ ಮಹಿಳಾ ವಕೀಲರನ್ನೇ ನೇಮಿಸುವುದು. ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಕಡೆ ಜನಸಂದಣಿ ಸ್ಥಳಗಳಾದ ಪ್ರೇಕ್ಷಣೀಯ ಸ್ಥಳಗಳು, ದೇವಸ್ಥಾನ, ಶಾಲಾ ಕಾಲೇಜು ಮುಂತಾದ ಕಡೆಗಳಲ್ಲಿ ಕಣ್ಗಾವಲಿಡಲು ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಈಗಾಗಲೇ ಪೊಲೀಸರು ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಸದನದಲ್ಲಿ ತಿಳಿಸಿದರು.