• ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದರೂ ಹಣ ಬಂದಿಲ್ಲ
• ರಾಜ್ಯ ಸರ್ಕಾರದಿಂದ ತಾತ್ಕಾಲಿಕವಾಗಿ 2,000 ರೂ. ಪರಿಹಾರ
• ಮೇವಿಗೆ-ನೀರಿಗೆ ಕೊರತೆ ಇಲ್ಲದಂತೆ ನೋಡಿಕೊಳ್ಳಲು ಸೂಚನೆ
• ಬೆಳೆವಿಮೆ-ಎನ್ಡಿಆರ್ ಎಫ್, ಎಸ್ಡಿಆರ್ ಎಫ್ ನಿಂದ 4,000 ಕೋಟಿ ಪರಿಹಾರಕ್ಕೆ ಆಲೋಚನೆ
ಬೆಳಗಾವಿ:
ಬರದಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಅವರ ನೆರವಿಗೆ ಸರ್ಕಾರ ಬದ್ಧವಾಗಿದೆ. ಬೆಳೆವಿಮೆ-ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ ನಿಂದ 4,000 ಕೋಟಿ ಪರಿಹಾರ ನೀಡುವ ಆಲೋಚನೆ ಇದೆ. ಈ ವಿಚಾರದಲ್ಲಿ ವಿರೋಧ ಪಕ್ಷದ ಸಲಹೆಗಳನ್ನೂ ಪರಿಗಣಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ರೈತರಿಗೆ ತಲುಪಿಸಲಾಗಿರುವ ಬರ ಪರಿಹಾರದ ಕುರಿತು ಶಾಸಕ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯ ಕಳೆದ ಎರಡು ದಶಕದಲ್ಲಿ 14 ಬಾರಿ ಬರದ ಪರಿಸ್ಥಿತಿಯನ್ನು ಎದುರಿಸಿದೆ. ಈ ವರ್ಷ ಬರ ಸ್ಥಿತಿ ಮತ್ತಷ್ಟು ತೀವ್ರವಾಗಿದೆ. 223 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದ್ದು, 18,200 ಕೋಟಿ ಪರಿಹಾರ ಕೇಳಿ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ. ಆದರೆ, ಕೇಂದ್ರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ.
ರೈತರ ಸಂಕಷ್ಟಕ್ಕೆ ಕೂಡಲೇ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಭಾಗಶಃ ಪರಿಹಾರವಾಗಿ 2,000 ರೂ. ಪರಿಹಾರ ಘೋಷಿಸಿದೆ. ಈ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಈ ಹಣ ಸಾಲದು ಎಂಬ ವಿಚಾರ ನಮಗೂ ಗೊತ್ತಿದೆ. ಆದರೆ, ಜವಾಬ್ದಾರಿಯುತ ಸರ್ಕಾರವಾಗಿ ರೈತರ ಸಂಕಷ್ಟಕ್ಕೆ ಎಲ್ಲಾ ರೀತಿಯಲ್ಲೂ ನೆರವಾಗಲು ನಾವು ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರದ ಪರಿಹಾರ ಹಣ ಬಂದ ಕೂಡಲೇ ಆ ಹಣವನ್ನೂ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ಬೆಳೆ ವಿಮೆ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, “ರಾಜ್ಯದಲ್ಲಿ 20 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದು ವಿಮಾ ಕಂಪೆನಿಗಳು ಈಗಾಗಲೇ 460 ಕೋಟಿ ರೂ. ಬಿಡುಗಡೆಗೊಳಿಸಿದೆ. ಶೀಘ್ರದಲ್ಲಿ 2,000 ಕೋಟಿ ರೂ. ಬೆಳೆವಿಮೆ ಬರಲಿದೆ. ಇದರ ಜೊತೆಗೆ ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ ಫಂಡ್ ನಿಂದಲೂ ಹಣ ಕ್ರೋಡೀಕರಿಸಿ ರೈತರಿಗೆ 4,000 ಕೋಟಿ ರೂ. ವರೆಗೆ ಬರ ಪರಿಹಾರ ನೀಡಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದಿಂದ ತುರ್ತು ಪರಿಹಾರದ ನಿರೀಕ್ಷೆ:
ಕೇಂದ್ರ ಸರ್ಕಾರದಿಂದ ಈವರೆಗೆ ಪರಿಹಾರ ಹಣ ಲಭ್ಯವಾಗದ ಕುರಿತೂ ಗಮನ ಸೆಳೆದ ಅವರು, “ಬೇರೆ ರಾಜ್ಯಗಳಲ್ಲಿ ನಮಗಿಂತ ಭೀಕರ ಬರ ಇದೆ. 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಹಾಗೂ 18 ರಾಜ್ಯಗಳಲ್ಲಿ ಹಿಂಗಾರಿನ ಬರ ಇದೆ. ಆದರೆ, ಕರ್ನಾಟಕದಲ್ಲಿ ಸೆ.13ಕ್ಕೆ ಮೊದಲ ರಾಜ್ಯವಾಗಿ ಬರ ಘೋಷಿಸಲಾಯಿತು. ಸೆ.22ಕ್ಕೆ 18,200 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಮೊದಲ ಮನವಿ (ಮೆಮೊರಾಂಡಂ) ಸಲ್ಲಿಸಲಾಯಿತು. ಎರಡನೇಯ ಮನವಿಯನ್ನೂ ಸಲ್ಲಿಸಲಾಗಿದೆ. ಆದರೂ, ಬರ ಪರಿಹಾರದ ಹಣ ಬಂದಿಲ್ಲ” ಎಂದು ವಿಷಾಧಿಸಿದರು.
ರಾಜ್ಯಕ್ಕೆ ಬರ ಪರಿಹಾರದ ಹಣ ತರುವ ಹಾಗೂ ಕೇಂದ್ರ ನಾಯಕರಿಗೆ ರಾಜ್ಯದ ಸಮಸ್ಯೆ ಅರ್ಥಮಾಡಿಸುವ ಸಲುವಾಗಿ ಕೇಂದ್ರ ಗೃಹ ಮತ್ತು ಕೃಷಿ ಸಚಿವರ ಭೇಟಿಗೆ ಸಮಯ ಕೋರಿ ಪತ್ರ ಬರೆಯಲಾಗಿತ್ತು. ಆದರೆ, ಆ ಪತ್ರಕ್ಕೆ ಉತ್ತರ ಸಿಗದ ಕಾರಣ ಎರಡೂ ಇಲಾಖೆಯ ಕಾರ್ಯದರ್ಶಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದರು. ಆದರೂ ಸಹ ಈವರೆಗೆ ರಾಜ್ಯದ ಪರಿಹಾರ ಮೊತ್ತ ಬಂದಿಲ್ಲ ಎಂದು ವಿವರಿಸಿದರು.
ಬರ ನಿರ್ವಹಣಾ ಕ್ರಮಗಳೇನು?
ಬರ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳೇನು? ಎಂಬ ಬಗ್ಗೆಯೂ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಪಶುಗಳಿಗೆ ಮೇವಿನ ಕೊರತೆ ಬರದಿರಲು 7 ಲಕ್ಷ ಮೇವಿನ ಕಿಟ್ ಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿದೆ. ಪಕ್ಕದ ರಾಜ್ಯಗಳಿಗೆ ಮೇವು ಕಳ್ಳಸಾಗಣೆ ತಡೆಯಲೂ ಕ್ರಮ ಜರುಗಿಸಲಾಗಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಕೂಡಲೇ 24 ಗಂಟೆಗಳಲ್ಲಿ ನೀರು ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಪ್ರಸ್ತುತ 90 ವಸತಿ ಪ್ರದೇಶದಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದು, 60 ಕಡೆ ಖಾಸಗಿ ಬೋರ್ ಮೂಲಕ ಹಾಗೂ ಉಳಿದ ಭಾಗಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಖಾತೆಯಲ್ಲಿ 894 ಕೋಟಿ ರೂ. ಹಣ ಇದ್ದು, ಕುಡಿಯುವ ನೀರಿನ ಪೂರೈಕೆಗೆ ಈ ಹಣ ಬಳಸಿಕೊಳ್ಳಲು ಸೂಚಿಸಲಾಗಿದೆ. ಗೋಶಾಲೆಗಳ ಅಗತ್ಯವಿದ್ದರೆ ಅವನ್ನೂ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.