Home ಬೆಂಗಳೂರು ನಗರ ಸಾಹಿತಿ, ಚಿಂತಕರಿಗೆ ಭದ್ರತೆ ಒದಗಿಸಲು ಸರ್ಕಾರ ಸಿದ್ಧ: ಗೃಹ ಸಚಿವ ಡಾ.ಜಿ. ಪರಮೇಶ್ವರ್

ಸಾಹಿತಿ, ಚಿಂತಕರಿಗೆ ಭದ್ರತೆ ಒದಗಿಸಲು ಸರ್ಕಾರ ಸಿದ್ಧ: ಗೃಹ ಸಚಿವ ಡಾ.ಜಿ. ಪರಮೇಶ್ವರ್

41
0
Karnataka: Government is ready to provide security to writers and thinkers: Home Minister Dr.G. Parameshwar
Karnataka: Government is ready to provide security to writers and thinkers: Home Minister Dr.G. Parameshwar

ಬೆಂಗಳೂರು:

ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳು ಮತ್ತು ಚಿಂತಕರಿಗೆ ಅಗತ್ಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಸಾಹಿತಿಗಳು ಬಯಸಿದರೆ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ಕೆ. ಮರುಳಸಿದ್ದಪ್ಪ ನೇತೃತ್ವದಲ್ಲಿ ಪರಮೇಶ್ವರ ಅವರನ್ನು ಮಂಗಳವಾರ ಭೇಟಿ ಮಾಡಿದ ಸಾಹಿತಿಗಳು, ನಿರಂತರವಾಗಿ ಬೆದರಿಕೆ ಕರೆಗಳು ಮತ್ತು ಪತ್ರಗಳು ಬರುತ್ತಿರುವ ಕುರಿತು ಮಾಹಿತಿ ನೀಡಿದರು. ಈ ವೇಳೆ ಸಾಹಿತಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವರು ಈ ಕುರಿತು ವಿವರವಾಗಿ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ರಾಜ್ಯದಲ್ಲಿ ಗೌರಿ ಲಂಕೇಶ್‌ ಮತ್ತು ಎಂ.ಎಂ. ಕಲಬುರ್ಗಿ ಅವರ ಕೊಲೆಗಳಾಗಿವೆ. ಈಗಲೂ ಹಲವು ಸಾಹಿತಿಗಳಿಗೆ ಬೆದರಿಕೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು’ ಎಂದು ಹೇಳಿದರು.

ಸಾಹಿತಿಗಳು ಸಲ್ಲಿಸಿರುವ ಮನವಿ ಪತ್ರವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನೀಡಲಾಗಿದೆ. ಅವರು ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಇಬ್ಬರು ಸಾಹಿತಿಗಳಿಗೆ ಪೊಲೀಸ್ ಭದ್ರತೆಯನ್ನು ಈಗಾಗಲೇ ಒದಗಿಸಲಾಗಿದೆ. ಇನ್ನು ಯಾವುದೇ ಸಾಹಿತಿಗಳು ಕೋರಿಕೆ ಸಲ್ಲಿಸಿದರೆ ವೈಯಕ್ತಿಕ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.

ಮರುಳಸಿದ್ದಪ್ಪ ಮಾತನಾಡಿ, ‘ಬಿಜೆಪಿಯ ಅಪಾಯಕಾರಿ ನಡೆಯನ್ನು ನಾವು ಟೀಕಿಸಿದ್ದೇವೆ. ಇದರಿಂದ ಬಿಜೆಪಿಯವರಿಗೆ ಆತಂಕವಾಗಿದೆ. ಗೌರಿ ಲಂಕೇಶ್‌ ಕೊಲೆ ಏಕೆ ನಡೆದಿದೆ ಎಂಬುದು ಗೊತ್ತಿದೆ. ಅದೇ ಗುಂಪು ನಮ್ಮನ್ನು ಬೆದರಿಸುತ್ತಿದೆ. ಆ ಗುಂಪನ್ನು ಪತ್ತೆಹಚ್ಚಬೇಕು’ ಎಂದರು.

ಈ ಸಂದರ್ಭದಲ್ಲಿ ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಿ. ರಾಮಕೃಷ್ಣ, ಎಲ್‌.ಎನ್‌. ಮುಕುಂದರಾಜ್‌, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವು ಸಾಹಿತಿಗಳು ನಿಯೋಗದಲ್ಲಿದ್ದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಕೂಡ ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here