ಬೆಂಗಳೂರು: ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯಲ್ಲಿ ಬರುವ ಐದು ನಗರ ನಿಗಮಗಳಿಗೆ ವಾರ್ಡ್ವಾರು ಕ್ಷೇತ್ರ ಪುನರ್ ವಿಂಗಡಣೆ ಕುರಿತಂತೆ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಅಕ್ಟೋಬರ್ 15ರವರೆಗೆ ಆಹ್ವಾನಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸ ಸೌಧ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬೆಂಗಳೂರು – 560001 ಇವರಿಗೆ ಲಿಖಿತವಾಗಿ ಸಲ್ಲಿಸಬೇಕು. ಸಲ್ಲಿಸಲಾದ ಅಭಿಪ್ರಾಯಗಳನ್ನು ಪರಿಶೀಲಿಸಿ ಅಂತಿಮ ವಾರ್ಡ್ ಪುನರ್ವಿಂಗಡಣೆ ಜಾರಿಗೆ ತರಲಾಗುವುದು.
ವಾರ್ಡ್ ಹಂಚಿಕೆ (ಗ್ರೇಟರ್ ಬೆಂಗಳೂರು ಪ್ರಾಧಿಕಾರ):
- ಬೆಂಗಳೂರು ಕೇಂದ್ರ ನಿಗಮ: ಶಿವಾಜಿನಗರ, ವಸಂತನಗರ, ಇಂದಿರಾನಗರ, ಹಲಸೂರು, ರಿಚ್ಮಂಡ್ ಟೌನ್, ಶೇಷಾದ್ರಿಪುರಂ, ಸಂಪಂಗಿರಾಮನಗರ ಸೇರಿ 63 ವಾರ್ಡ್ಗಳು.
- ಬೆಂಗಳೂರು ಪೂರ್ವ ನಿಗಮ: ಕೆ.ಆರ್.ಪುರಂ, ರಾಮಮೂರ್ತಿನಗರ, ವೈಟ್ಫೀಲ್ಡ್, ಹೂಡಿ, ಹೊರಮಾವು, ಕಾಡುಗೋಡಿ, ಮೇಡಹಳ್ಳಿ ಸೇರಿ 50 ವಾರ್ಡ್ಗಳು.
- ಬೆಂಗಳೂರು ಪಶ್ಚಿಮ ನಿಗಮ: ಮಲ್ಲೇಶ್ವರಂ, ಸದಾಶಿವನಗರ, ರಾಜಾಜಿನಗರ, ಪೀಣ್ಯ, ಅಂದ್ರಹಳ್ಳಿ, ಕೆಂಪೇಗೌಡ ನಗರ ಸೇರಿ 111 ವಾರ್ಡ್ಗಳು.
- ಬೆಂಗಳೂರು ಉತ್ತರ ನಿಗಮ: ಯಲಹಂಕ ಉಪಗ್ರಹ ಪಟ್ಟಣ, ಜಕ್ಕೂರು, ವಿದ್ಯಾರಣ್ಯಪುರ, ತಾಣಿಸಂದ್ರ, ಸಿಂಗಾಪುರ ಸೇರಿ 72 ವಾರ್ಡ್ಗಳು.
- ಬೆಂಗಳೂರು ದಕ್ಷಿಣ ನಿಗಮ: ಜಯನಗರ, ಕೋರಮಂಗಲ, ಬಿಟಿಎಂ ಲೇಔಟ್, ಬನಶಂಕರಿ, ಪದ್ಮನಾಭನಗರ, ಮಡಿವಾಳ, ಈಜಿಪುರ ಸೇರಿ 72 ವಾರ್ಡ್ಗಳು.
ರಾಜ್ಯ ಸರ್ಕಾರವು ಈ ಕರಡು ಅಧಿಸೂಚನೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಒತ್ತಿ ಹೇಳಿದ್ದು, ನಿಗದಿತ ಅವಧಿಯಲ್ಲಿ ಸಲ್ಲಿಸಲಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.