ದಕ್ಷಿಣ ಬೆಂಗಳೂರಿನ ಕತ್ತರಗುಪ್ಪಯಲ್ಲಿ 300 ಕೋಟಿ ರೂ.ಗಳ ಮೌಲ್ಯದ ಬಿಬಿಎಂಪಿ ಭೂಮಿಯ ಖಾತಾ ಅಕ್ರಮವಾಗಿ ವರ್ಗಾಯಿಸಿದರು
ಬಿಜೆಪಿ ಮುಖಂಡ ಮತ್ತು ಮಾಜಿ ಕಾರ್ಪೋರೇಟರ್ ಎನ್.ಆರ್.ರಮೇಶ್ ಎಸಿಬಿಗೆ ದೂರು ನೀಡಿದ ನಂತರ ಖಾತಾ ಹಗರಣ ಬಹಿರಂಗ
ಬೆಂಗಳೂರು:
ಪ್ರಮುಖ ಬೆಳವಣಿಗೆಯಲ್ಲಿ, ₹ 300 ಕೋಟಿ ಬೆಲೆಬಾಳುವ ಬಿಬಿಎಂಪಿ ಭೂಮಿಯ ಖಾತಾ ಅಕ್ರಮವಾಗಿ ವರ್ಗಾಯಿಸಿರುವ ಆರೋಪ ಅಡಿಯಲ್ಲಿ, ಬಿಬಿಎಂಪಿ ಆಡಳಿತಾಧಿಕಾರಿಯ ಮಾಜಿ ವಿಶೇಷ ಅಧಿಕಾರಿ ವಿ ತಾರನಾಥ್ ಸೇರಿದಂತೆ ನಾಲ್ಕು ಬಿಬಿಎಂಪಿ ಕಂದಾಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತಾರನಾಥ್ ಕಳೆದ ವಾರ ತನಕ ಬಿಬಿಎಂಪಿ ಆಡಳಿತಾಧಿಕಾರಿಯ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ಪ್ರಸ್ತುತ ಅವರನ್ನು ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಸಹಾಯಕ ಆಯುಕ್ತ (ಆಡಳಿತ) ಆಗಿ ನೇಮಕ ಮಾಡಲಾಗಿದೆ — ಇದು ಬಿಬಿಎಂಪಿಯ ಆಡಳಿತ-ಸಂಬಂಧಿತ ಕಾರ್ಯಗಳನ್ನು ಪರಿಶೀಲಿಸುವ ಎರಡು ಹುದ್ದೆಗಳಲ್ಲಿ ಒಂದಾಗಿದೆ.
ತಾರನಾಥ್ ಅವರಲ್ಲದೆ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಇತರ ಅಧಿಕಾರಿಗಳಾದ ಎಂ. ಲಿಂಗಯ್ಯ, ಕಂದಾಯ ಪರಿವೀಕ್ಷಕರು, ಸಹಾಯಕ ಕಂದಾಯ ಅಧಿಕಾರಿ (ಹೆಗ್ಗನಹಳ್ಳಿ), ಈ ಕಾಂಚನ, ಸಹಾಯಕ ಕಂದಾಯ ಅಧಿಕಾರಿ (ದಕ್ಷಿಣ-ಮಾರುಕಟ್ಟೆ) ಮತ್ತು ಹೆಚ್. ರಾಮಯ್ಯ, ಕಂದಾಯ ಪರಿವೀಕ್ಷಕರು. ಸಹಾಯಕ ಕಂದಾಯ ಅಧಿಕಾರಿ (ರಾ.ರಾ.ನಗರ)ಉಪ ವಿಭಾಗ — ಈ ನಾಲ್ವರು ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ/ವಿಚಾರಣೆಯನ್ನು ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರ ಕಲಂ 17(ಎ) ಮತ್ತು ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ 14 ಸೇಲೋಯು 2016, ದಿನಾಂಕ:14-03-2016ರ ಪ್ರಕಾರ ಪೂರ್ವಾನುಮತಿಯನ್ನು ಆದೇಶಿಸಿದೆ.
ಮಾಜಿ ಕಾರ್ಪೊರೇಟರ್ , ಬಿಜೆಪಿಯ ಬೆಂಗಳೂರು ದಕ್ಷಿಣ ಅಧ್ಯಕ್ಷ ಎನ್.ಆರ್.ರಮೇಶ್ ಅವರು 2019 ರ ನವೆಂಬರ್ 13 ರಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿಗೆ (ಬೆಂಗಳೂರು ಕೇಂದ್ರ) ಸಲ್ಲಿಸಿದ ದೂರಿನ ಫಲವೇ ಈ ಬೆಳವಣಿಗೆ.
ದಕ್ಷಿಣ ಬೆಂಗಳೂರಿನಲ್ಲಿ ₹ 300 ಕೋಟಿ ಗಳ ಸರ್ಕಾರಿ ಜಮೀನಿಗೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಖಾತಾ ನೀಡಿದ್ದಾರೆ ಎಂದು ರಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದರು. 62 ಸರ್ಕಾರಿ ಅಧಿಕಾರಿಗಳ ವಿರುದ್ಧ ಮತ್ತು ಭವಾನಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ವಿರುದ್ಧ ದೂರು ದಾಖಲಿದ್ದರು.
ರಮೇಶ್ ಅವರ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಮಾರ್ಚ್ 14, 2016 ರಂದು ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಕೋರಿದ್ದರು.
ಏತನ್ಮಧ್ಯೆ, ಬಿಬಿಎಂಪಿಯ ದಕ್ಷಿಣ ವಲಯ ಜಂಟಿ ಆಯುಕ್ತರು ಮತ್ತು ಎಆರ್ಒ (ಬನಶಂಕರಿ) ದಿನಾಂಕ: 01-12-2020ರ ಪತ್ರಗಳಲ್ಲಿ ಸ್ವತ್ತಿನ ಸಂಖ್ಯೆ: 35 ಮತ್ತು 36, ಎಸ್-ಬ್ಲಾಕ್, ಭವಾನಿ, ಹೆಚ್.ಬಿ.ಸಿ.ಎಸ್. ಕತ್ತರಗುಪ್ಪ ಬನಶಂಕರಿ 3ನೇ ಹಂತ, ಬೆಂಗಳೂರು ಈ ಸ್ವತ್ತುಗಳನ್ನು ಪಾಲಿಕೆಯ ಆಸ್ತಿ ವಹಿಯಲ್ಲಿ ದಾಖಲಾತಿ ತೆಗೆದುಕೊಂಡಿರುವುದು ಕಂಡುಬಂದಿರುತ್ತದೆ ಎಂದು ತಿಳಿಸಿದರು.
ಏನು ಈ ವಿಷಯ?
ತದನಂತರ ಸ್ವತ್ತಿನ ಸಂಖ್ಯೆ: 35ರ ಖಾತೆಯನ್ನು ದಿನಾಂಕ: 23-06-2017ರಂದು ಟಿ.ದೇವಮ್ಮ ರವರಿಂದ ಕ್ರಯ ಪತ್ರದ ಆಧಾರ ಶ್ರೀನಿವಾಸ್‌ದಾಸ್ ಹೆಸರಿಗೆ ವರ್ಗಾಯಿಸಲಾಗಿದೆ. ಈ ಅವಧಿಯಲ್ಲಿ ಎಂ.ಲಿಂಗಯ್ಯ, ಕಂದಾಯ ಪರಿವೀರರು ಮತ್ತು ವಿ.ತಾರಾನಾಥ್, ಸಹಾಯಕ ಕಂದಾಯ ಅಧಿಕಾರಿ ಅವರುಗಳು ಕಾರ್ಯ ನಿರ್ವಹಿಸಿರುವುದು ಹಾಜರಾತಿ ಪುಸ್ತಕದಲ್ಲಿ ಕಂಡುಬಂದಿರುತ್ತದೆ.
ಸ್ವತ್ತಿನ ಸಂಖ್ಯೆ: 360 ಖಾತೆಯನ್ನು ದಿನಾಂಕ: 16-10-2015 ರಂದು ಎಂ.ಡಿ, ಜವರಪ್ಪ ಹೆಸರಿನಿಂದ ಕಯಪತ್ರದ ಆಧಾರ ಜನೇಂದ್ರಕುಮಾರ್ ಮತ್ತು ವಾಣಿ: ಆರ್. ಜನೇಂದ್ರಕುಮಾರ್ ರವರುಗಳಿಗೆ ವರ್ಗಾವಣೆ ಮಾಡಿರುವುದು ಕಂಡುಬಂದಿರುತ್ತದೆ. ಈ ಅವಧಿಯಲ್ಲಿ ಹೆಚ್. ರಾಮಯ್ಯ, ಕಂದಾಯ ಪರಿವೀಕ್ಷಕರು ಮತ್ತು ಈ ಕಾಂಚನ, ಸಹಾಯಕ ಕಂದಾಯ ಅಧಿಕಾರಿ ರವರುಗಳೂ, ಕಾರ್ಯನಿರ್ವಹಿಸಿರುವುದು ಹಾಜರಾತಿ ಪುಸ್ತಕದಲ್ಲಿ ಕಂಡುಬಂದಿರುತ್ತದೆ.
ಆದರೆ, ಕಂದಾಯ ಅಧಿಕಾರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರವರ ತಿಳುವಳಿಕೆ ಪತ್ರಗಳ ಆಧಾರ ಪಾಲಿಕೆಯ ದಾಖಲೆಗಳಲ್ಲಿ ದಾಖಲಾತಿ ತೆಗೆದುಕೊಂಡು ಸಮಯದಲ್ಲಿ ಕಾರ್ಯನಿರ್ವಹಿಸಿದ ಕಂದಾಯ ಪರಿವೀಕ್ಷಕರು ಮತ್ತು ಸಹಾಯಕ ಕಂದಾಯ ಅಧಿಕಾರಿ ರವರ ವಿವರಗಳು ಹಾಗೂ ಹಾಜರಾತಿ ಪುಸ್ತಕಗಳ ಪ್ರತಿಗಳೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
ನಂತರ, ಮಾರ್ಚ್ 10, 2020 ರಂದು, ಬಿಬಿಎಂಪಿಯ ಉಪ ಆಯುಕ್ತರು (ಆಡಳಿತ) ಲಿಂಗಮೂರ್ತಿ, ಸಲ್ಲಿಸಿರುವ ವರದಿಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ತಾರನಾಥ್, ಲಿಂಗಯ್ಯ, ಕಾಂಚನ, ಮತ್ತು ರಾಮಯ್ಯ, ಇವರುಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ/ವಿಚಾರಣೆಯನ್ನು ಕೈಗೊಳ್ಳಲು ಭ್ರಷ್ಟಾಚಾರ ಪ್ರತಿ ಬಂಧಕ ಕಾಯ್ದೆ ಅಡಿಯಲ್ಲಿ ಆದೇಶ ನೀಡಿದ್ದಾರೆ.