ಬೆಳಗಾವಿ/ಬೆಂಗಳೂರು:
ರಾಜ್ಯದ ಪೊಲೀಸರು, ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಸೌಲಭ್ಯ ಒದಗಿಸಲು,ರಾಜ್ಯ ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಇಂದು ವಿಧಾನ ಸಭೆಗೆ ತಿಳಿಸಿದ್ದಾರೆ.
ಸಚಿವರು, ಇಂದು ವಿಧಾನಸಭೆಯಲ್ಲಿ, ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಶ್ರೀ ಶಿವಲಿಂಗೇಗೌಡ ಅವರಿಗೆ ಉತ್ತರಿಸುತ್ತಾ, ರಾಜ್ಯದಲ್ಲಿ “ಪೊಲೀಸ್-ಗೃಹ ೨೦೨೫’ ಎಂಬ ಯೋಜನೆಯನ್ನು ಹಾಕಿಕೊಂಡಿದ್ದು, ಸರಿ ಸುಮಾರು ಹತ್ತು ಸಾವಿರ ವಸತಿ ಗೃಹಗಳನ್ನು, ಪೊಲೀಸ್ ಸಿಬ್ಬಂದಿಗಳಿಗೆ ಇನ್ನ್ನು ಐದು ವರ್ಷಗಳಲ್ಲಿ ಕಟ್ಟಿಕೊಡಲಾಗುವುದು ಎಂದರು.
ಸದಸ್ಯರು ಎತ್ತಿದ, ಶಿಥಿಲಾವಸ್ಥೆಯಲ್ಲಿರುವ ಗಂಡಸಿ ಪೊಲೀಸ್ ಠಾಣೆ ಕುರಿತ ಪ್ರಶ್ನೆಗೆ ಸಚಿವರು “ರಾಜ್ಯದಲ್ಲಿ ಸುಮಾರು ಒಂದು ನೂರು ಪೊಲೀಸ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಹಳೆಯ ಹಾಗೂ ಶಿಥಿಲಗೊಂಡಿರುವ ಕಟ್ಟಡಗಳನ್ನು ದುರಸ್ಥಿ ಗೊಳಿಸಲಾಗುವುದೂ” ಎಂದು ಸಚಿವರು ತಿಳಿಸಿದರು.
“ಪೊಲೀಸ್ ಸಿಬ್ಬಂದಿಗಳಿಗೆ, ಕರ್ತವ್ಯ ನಿರ್ವಹಿಸಲು ಉತ್ತಮ ವಾತಾವರಣ ಹಾಗೂ ವಾಸಿಸಲು ಸುಸಜ್ಜಿತ ಮನೆಯನ್ನು ಒದಗಿಸುತ್ತೇವೆ” ಎಂದು ಸಚಿವರು ಸದನಕ್ಕೆ ತಿಳಿಸಿದರು.