Home ಆರೋಗ್ಯ ಝಿಕಾ ವೈರಸ್‌ ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಆರೋಗ್ಯ ಇಲಾಖೆ

ಝಿಕಾ ವೈರಸ್‌ ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಆರೋಗ್ಯ ಇಲಾಖೆ

15
0
Zika Virus

ಬೆಂಗಳೂರು: ಡೆಂಗ್ಯೂ ಮಧ್ಯೆ ಝಿಕಾ ವೈರಸ್‌ ಆತಂಕ ಶುರುವಾಗಿದ್ದು, ಸೋಂಕು ತಡೆಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಈಡಿಸ್ ಲಾರ್ವಾ ನಿರ್ಮೂಲನೆಯು ಸಮರ್ಪಕವಾಗಿ ನಡೆದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಹಾಗೂ ಝಿಕಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಬಹುದು. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಗದಿತವಾಗಿ ಮತ್ತು ಪ್ರತಿ ಶುಕ್ರವಾರ ಲಾರ್ವಾ ನಿರ್ಮೂಲನಾ ದಿನವೆಂದು ಘೋಷಿಸಿ, ಸಮರೋಪಾದಿಯಲ್ಲಿ ಲಾರ್ವಾ ನಿರ್ಮೂಲನೆಯನ್ನು ಫಲಿತಾಂಶ ಆಧಾರಿತ ಚಟುವಟಿಕೆಯನ್ನಾಗಿ ಕೈಗೊಳ್ಳಲು ಈಗಾಗಲೇ ಸಲಹಾ ಪತ್ರಗಳು, ಸುತ್ತೋಲೆಗಳು, ನಿರ್ದೇಶನಗಳನ್ನು ನೀಡಿದ್ದರೂ, ಈ ಚಟುವಟಿಕೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದ ಹಿನ್ನೆಲೆ ಝಿಕಾ ವೈರಸ್ ಪ್ರಸರಣವೂ ಕಂಡುಬಂದಿದೆ.

D-O-letter-to-DC-CEO-_-Prevention-Control-Zika-Virus-Disease

ಝಿಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ, ಡೆಂಗ್ಯೂ ಜ್ವರದ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಹಾಗೂ ನಿರ್ವಹಣೆ ಮಾಡಲಾಗುತ್ತದೆ. ಮುಂದುವರಿದು, ಗರ್ಭಿಣಿಯರು ಝಿಕಾ ವೈರಸ್ ಸೋಂಕಿತರಾದಲ್ಲಿ ಹುಟ್ಟುವ ಮಗುವಿನಲ್ಲಿ ಮೈಕ್ರೋಸೆಫಾಲಿ ಹಾಗೂ ಇನ್ನಿತರ ನರಸಂಬಂಧಿ ಅಂಗವೈಕಲ್ಯ ಗಳು ಮತ್ತು ದೃಷ್ಟಿ ದೋಷ ಉಂಟಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ. ಆದ್ದರಿಂದ, ಝಿಕಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಈ ಕೆಳಕಂಡ ಕ್ರಮಗಳನ್ನು ಆಯಾ ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ, ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಚಿಸಿದೆ.

ಝಿಕಾ ವೈರಸ್ ಸೋಂಕಿನ ಲಕ್ಷಣಗಳು:

ಜ್ವರ, ಕೆಂಪಾದ ಕಣ್ಣುಗಳು, ತಲೆನೋವು ಗಂಧೆಗಳು, ಸ್ನಾಯು ಮತ್ತು ಕೀಲುಗಳಲ್ಲಿ ನೋವು ಇವು 2-7 ದಿನಗಳ ಅವಧಿಗೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇಂತಹ ಲಕ್ಷಣಗಳನ್ನು ಹೊಂದಿರುವವರ ಸೀರಂ ಮಾದರಿಯನ್ನು ಬೆಂಗಳೂರು ಎನ್‌ಐವಿ ಸಂಸ್ಥೆಗೆ ಜಿಕಾ ವೈರಸ್ ಪರೀಕ್ಷೆಗೆ ರವಾನಿಸಬೇಕು.
ಸೀರಂ ಮಾದರಿ ಪರೀಕ್ಷೆಯಿಂದ ಝಿಕಾ ವೈರಸ್ ಸೋಂಕು ದೃಢಪಟ್ಟ ಪ್ರಕರಣದ ಕುಟುಂಬದ ಎಲ್ಲಾ ಸದಸ್ಯರ ಸೀರಂ ಮಾದರಿಗಳನ್ನೂ ಸಹ ಎನ್ ಐ ವಿಗೆಗೆ ಜಿಕಾ ವೈರಸ್ ಪರೀಕ್ಷೆಗೆ ರವಾನಿಸಬೇಕು.

ಸೀರಂ ಮಾದರಿಯಲ್ಲಿ ಅಥವಾ ಈಡಿಸ್ ಸೊಳ್ಳೆಗಳಲ್ಲಿ ಝಿಕಾ ವೈರಸ್ ಸೋಂಕು ದೃಢಪಟ್ಟಲ್ಲಿ ಸುತ್ತಲಿನ 3 ಕಿ ಮೀ ವ್ಯಾಪ್ತಿಯ (Diameter) ಪ್ರದೇಶವನ್ನು ‘ಕಂಟೋನ್ಮೆಂಟ್ ವಲಯ’ವೆಂದು ಗುರುತಿಸಬೇಕು.

ಕಂಟೋನ್ಮೆಂಟ್ ವಲಯದಲ್ಲಿರುವ ಎಲ್ಲಾ ಗರ್ಭಿಣಿಯರ ಸೀರಂ ಹಾಗೂ ಮೂತ್ರದ ಮಾದರಿಗಳನ್ನು ಝಿಕಾ ಪರೀಕ್ಷೆಗಾಗಿ ಎನ್‌ಐವಿಗೆ ರವಾನಿಸಬೇಕು.

ಕಂಟೋನ್ಮೆಂಟ್ ವಲಯ’ ವ್ಯಾಪ್ತಿಯಿಂದ 1 ಕಿಮೀ ಪ್ರದೇಶವನ್ನು Risk Zone ಎಂದು ಗುರುತಿಸಿ ಲಾರ್ವಾ ಸಮೀಕ್ಷೆಯನ್ನು ತೀವ್ರಗೊಳಿಸುವುದು ಕಡ್ಡಾಯವಾಗಿದೆ. ಹಾಗೂ ಶಂಕಿತ ಜಿಕಾ ಜ್ವರ ಪ್ರಕರಣಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದು.

ಶಂಕಿತ ಪ್ರಕರಣಗಳ ಹಾಗೂ ಗರ್ಭಿಣಿಯರ ಮಾದರಿ ಸಂಗ್ರಹಣೆ, ಪರೀಕ್ಷೆಗಾಗಿ ಸಲ್ಲಿಕೆ ಹಾಗು ಲೈನ್ ಲಿಸ್ಟ್ ನಿರ್ವಹಣೆಯ ಜವಾಬ್ದಾರಿಯು ಆಯಾ ಜಿಲ್ಲಾ ಸರ್ವೇಕ್ಷಣಾ ಘಟಕದ್ದಾಗಿದ್ದು, ಉಳಿದಂತೆ. ಈಡಿಸ್ ಲಾರ್ವಾ ನಿರ್ಮೂಲನೆ ಸೇರಿದಂತೆ, ರೋಗವಾಹಕ ನಿಯಂತ್ರಣ ಕ್ರಮಗಳ ಅನುಷ್ಠಾನವು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳದ್ದಾಗಿದೆ.

ಕಂಟೋನ್ಮೆಂಟ್ ವಲಯದ ಎಲ್ಲಾ ಮನೆಗಳಿಗೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ದಿನ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸುವುದು ಹಾಗೂ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಸಂಸ್ಥೆಗೆ ತೆರಳಲು ತಿಳಿಸುವುದು ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಆರೋಗ್ಯ ಶಿಕ್ಷಣ ನೀಡುವುದು ಮತ್ತು ಈಡಿಸ್ ಲಾರ್ವಾ ನಿರ್ಮೂಲನೆ ಮಾಡುವುದು ಕಡ್ಡಾಯವಾಗಿದೆ.

ಸಿಬ್ಬಂದಿ ಕೊರತೆ ಇದ್ದಲ್ಲಿ ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ, ಆಶಾ, ಅರೆ – ವೈದ್ಯಕೀಯ ವಿದ್ಯಾರ್ಥಿಗಳು, ಸ್ವಯಂಸೇವಕರ ಸೇವೆಯನ್ನು ಬಳಸಿಕೊಳ್ಳುವುದು.

ಕಂಟೋನ್ಮೆಂಟ್ ವಲಯ ವ್ಯಾಪ್ತಿಯ ಎಲ್ಲಾ ಆರೋಗ್ಯ ಸಂಸ್ಥೆಯ ವೈದ್ಯಕೀಯ ಹಾಗೂ ಅರೆ-ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡುವುದು.

ಗ್ರಾಮವಾರು, ಪ್ರದೇಶವಾರು ವರದಿಯಾಗುವ (House index, Container Index Beetran Indes ಗಳನ್ನು ಪ್ರತಿದಿನ ವಿಶ್ಲೇಷಿಸಿ, ಅಗತ್ಯ ಸೂಚನೆಗಳನ್ನು ನೀಡುವುದು.

ರೋಗವಾಹಕ ಈಡಿಸ್ ಸೊಳ್ಳೆಗಳ ಸಾಂದ್ರತೆಯನ್ನು ತಗಿಸಲು ತುರ್ತು ಕ್ರಮವಾಗಿ Pyrethrum 2% Extract ಅನ್ನು ಬಳಸಿ Indoor space spray ಯನ್ನು ಕೈಗೊಳ್ಳಬಹುದಾಗಿದೆ.

ಕಳೆದ 3 ತಿಂಗಳ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಹೆರಿಗೆಗಳ ಮಾಹಿತಿಯನ್ನು ಪಡೆದು, ಅವುಗಳ ಪೈಕಿ ಮೈಕ್ರೋಸೆಫಾಲಿ ಪ್ರಕರಣಗಳಿದ್ದಲ್ಲಿ ತಕ್ಷಣವೇ ವರದಿ ಮಾಡುವುದು.

ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಜಿಕಾ ವೈರಸ್ ಸೋಂಕು ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ, ತರಬೇತಿಯನ್ನು ನೀಡುವುದು.

ಝಿಕಾ ವೈರಸ್ ಸೋಂಕಿನ ನಿಯಂತ್ರಣದ ಸಂಬಂಧ ಅಂತರ-ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ನಡೆಸುವುದು ಹಾಗೂ ಲಭ್ಯ ಮಾಧ್ಯಮಗಳ ಮೂಲಕ ಜಿಕಾ ವೈರಸ್ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಚುರ ಪಡಿಸುವುದು.

ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಮನವಿ
ಸಾರ್ವಜನಿಕರು ಝಿಕಾ ವೈರಸ್ ಸೋಂಕು ಹಾಗೂ ನಿಯಂತ್ರಣದ ಕುರಿತು ಮಾಹಿತಿಯರನ್ನು ಹೊಂದಿರಬೇಕು ಹಾಗೂ ಅನಗತ್ಯ ಭಯದಿಂದ ದೂರವಿದ್ದು, ಈ ಕೆಳಕಂಡ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಝಿಕಾ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯ ಸ್ವರೂಪದ್ದಾಗಿದ್ದು, ತೀವ್ರ ಸ್ವರೂಪದ ಸೋಂಕಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹಾಗೂ ಸೋಂಕಿನಿಂದ ಮರಣ ಪ್ರಕರಣಗಳು ಅತಿ ವಿರಳ.
ಆದಾಗ್ಯೂ ಜ್ವರ, ಕೆಂಪಾದ ಕಣ್ಣುಗಳು, ತಲೆನೋವು, ಗಂಧೆಗಳು, ಸ್ನಾಯು ಮತ್ತು ಕೀಲುಗಳಲ್ಲಿ ನೋವು, ಈ ಲಕ್ಷಣಗಳನ್ನು ಹೊಂದಿದವರು ಹತ್ತಿರದ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಸದರಿ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ, ರೋಗ ಲಕ್ಷಣಗಳಿಗನುಗುಣವಾಗಿ ನಿರ್ವಹಣೆ ಮಾಡಲಾಗುವುದು

LEAVE A REPLY

Please enter your comment!
Please enter your name here