Home ಬೆಂಗಳೂರು ನಗರ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದ ಕರ್ನಾಟಕ ಹೈಕೋರ್ಟ್

ಮುರುಘಾ ಮಠದ ಆಡಳಿತಾಧಿಕಾರಿಯಾಗಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದ ಕರ್ನಾಟಕ ಹೈಕೋರ್ಟ್

23
0
Karnataka High Court appoints district judge as administrator of Muruga Mutt
Karnataka High Court appoints district judge as administrator of Muruga Mutt

ಬೆಂಗಳೂರು:

ಚಿತ್ರದುರ್ಗದ ಮುರುಘರಾಜೇಂದ್ರ ಮಠ ಮತ್ತು ಅದರ ಶಿಕ್ಷಣ ಸಂಸ್ಥೆಗಳ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.

ಈ ಕುರಿತಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠವು, ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮಂಗಳವಾರ (ಜುಲೈ 04) ಬೆಳಗ್ಗೆ 11 ಗಂಟೆಗೆ ಮಠದ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಸೂಚಿಸಿದೆ

ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ಅವರನ್ನು ಮಠದ ಆಡಳಿತಾಧಿಕಾರಿಯಾಗಿ ನೇಮಿಸಿದ್ದನ್ನು 2023ರ ಮೇ 22 ರಂದು ಏಕ ಸದಸ್ಯ ಪೀಠ ರದ್ದುಗೊಳಿಸಿತ್ತು. ಆದಾಗ್ಯೂ, ಮಠದ ಆಡಳಿತ ಮತ್ತು ವ್ಯವಹಾರಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವವರೆಗೆ ನಾಲ್ಕು ವಾರಗಳ ಕಾಲ ಆಡಳಿತಾಧಿಕಾರಿಯನ್ನು ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ. ಈ ಸಮಯ ಭಾನುವಾರ ಕೊನೆಗೊಂಡಿತು.

ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಇದೇ ಜುಲೈ 18ಕ್ಕೆ ಮುಂದೂಡಿದೆ.

ಮೇಲ್ಮನವಿಯ ವಿಚಾರಣೆ ನಡೆದು ಈ ನ್ಯಾಯಾಲಯದಿಂದ ಆದೇಶ ಹೊರಡಿಸುವವರೆಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಮತ್ತು ಮಠದ ಆಡಳಿತವನ್ನು ವಹಿಸಿಕೊಳ್ಳುವಂತೆ ನಾವು ಸೂಚಿಸುತ್ತೇವೆ. ಆದರೆ, ಜಿಲ್ಲಾ ನ್ಯಾಯಾಧೀಶರು ಯಾವುದೇ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳಬಾರದು. ಮಟ ಮತ್ತು ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಮಾತ್ರವೇ ನಿಭಾಯಿಸಬೇಕು ಎಂದಿದೆ.

ಈ ಸಂಬಂಧ ನ್ಯಾಯಾಧೀಶರಿಗೆ ಯಾವುದಾದರೂ ಅಗತ್ಯ ನೆರವು ಬೇಕಾದಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಯನ್ನು ಲಿಖಿತವಾಗಿ ಕೋರಬಹುದು. ಇದರನ್ವಯ ಜಿಲ್ಲಾಧಿಕಾರಿ ತಕ್ಷಣವೇ ಅಗತ್ಯ ನೆರವು ಕಲ್ಪಿಸಬೇಕು ಎಂದು ಪೀಠ ಹೇಳಿದೆ.

2022ರ ಸೆಪ್ಟೆಂಬರ್ 1 ರಂದು ಮುರುಘಾ ಮಠದ ಮಠಾಧೀಶರಾಗಿದ್ದ ಶಿವಮೂರ್ತಿ ಶರಣರನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ರಾಜ್ಯ ಸರ್ಕಾರ ಡಿಸೆಂಬರ್ 13, 2022 ರಂದು ಐಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು.

ಈ ನೇಮಕಾತಿಯನ್ನು ರದ್ದುಪಡಿಸಿದ ಏಕ ಸದಸ್ಯ ಪೀಠವು, ಬಂಧನದ ಹೊರತಾಗಿಯೂ, ಮಠಾಧೀಶರು ಮಠದ ಪೀಠಾಧಿಪತಿಯಾಗಿ ಮುಂದುವರೆದಿದ್ದಾರೆ ಮತ್ತು ಅವರ ಅನುಪಸ್ಥಿತಿಯಲ್ಲಿ ಏನಾಗಬೇಕೆಂಬುದು ಸಾಮಾನ್ಯವಾಗಿ ಭಕ್ತರಿಗೆ ಅಥವಾ ಸಂಬಂಧಿಸಿದ ಸಮುದಾಯದ ಪ್ರಮುಖರಿಗೆ ಬಿಟ್ಟದ್ದು ಎಂದು ಹೇಳಿದೆ. ಶಾಸಕಾಂಗದ ಅಧಿಕಾರದ ಅನುಪಸ್ಥಿತಿಯಲ್ಲಿ ಮಠದ ವ್ಯವಹಾರಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ನಾಗರಿಕ ಸಮಾಜದ ವೈಫಲ್ಯ ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

LEAVE A REPLY

Please enter your comment!
Please enter your name here