
ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೆ ₹200 ಏಕೀಕೃತ ಟಿಕೆಟ್ ದರ ನಿಗದಿ ಮಾಡಿದ ರಾಜ್ಯ ಸರ್ಕಾರದ ನಿಯಮಕ್ಕೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ನಿರಾಕರಿಸಿದೆ.
ನ್ಯಾಯಮೂರ್ತಿ ಸುರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾಗೆ ಪ್ರೇಕ್ಷಕರು ಪಾವತಿಸಿದ ಟಿಕೆಟ್ ದರದ ಮಾಸಿಕ ಲೆಕ್ಕವನ್ನು ಡಿಜಿಟಲ್ ಪಾವತಿ (ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ, ಬ್ಯಾಂಕ್ ವರ್ಗಾವಣೆ) ಹಾಗೂ ನಗದು ರೂಪದಲ್ಲೂ (ಜಿಎಸ್ಟಿ ಹೊರತುಪಡಿಸಿ) ನಿರ್ವಹಿಸಿ, ಪ್ರತೀ ತಿಂಗಳ 15ರೊಳಗೆ ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ನಿರ್ದೇಶಿಸಿದೆ.
ನ್ಯಾಯಾಲಯವು, ರಾಜ್ಯ ಸರ್ಕಾರದ ನಿಯಮಗಳನ್ನು ಪ್ರಶ್ನಿಸಿರುವ ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಪ್ರಕರಣದಲ್ಲಿ ಸೋತರೆ ಡಿಜಿಟಲ್ ಪಾವತಿ ಮಾಡಿದ ಪ್ರೇಕ್ಷಕರಿಗೆ ಹಣ ಹಿಂತಿರುಗಿಸಬಹುದು ಎಂದು ತಿಳಿಸಿದೆ. ನಗದು ಪಾವತಿಯ ವಿಷಯವನ್ನು ಅಂತಿಮ ತೀರ್ಪಿನ ನಂತರ ತೀರ್ಮಾನಿಸಲಾಗುವುದು. ಸರ್ಕಾರದ ನಿಯಮಗಳು ಅಂತಿಮವಾಗಿ ಮಾನ್ಯವಾದರೆ, ಹೆಚ್ಚುವರಿ ನಗದು ಹಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಳಸಬಹುದು ಎಂದು ಕೋರ್ಟ್ ಸೂಚಿಸಿದೆ.
ನ್ಯಾಯಾಲಯವು ಸೆಪ್ಟೆಂಬರ್ 23ರಂದು ಏಕಸದಸ್ಯ ಪೀಠ ನೀಡಿದ್ದ ತಾತ್ಕಾಲಿಕ ಆದೇಶವನ್ನು ತಿದ್ದುಪಡಿ ಮಾಡಿ, ಎಲ್ಲರ ಹಿತಾಸಕ್ತಿಯನ್ನು ಕಾಪಾಡುವಂತೆ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಲಾಗಿದೆ.
ಇದಲ್ಲದೆ, ಹೈಕೋರ್ಟ್ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಗೆ ಈ ಆದೇಶವನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ನಿಗದಿತ ಸ್ಥಳದಲ್ಲಿ ಹಾಗೂ ಚಿತ್ರ ಆರಂಭಕ್ಕೂ ಮುನ್ನ ಪ್ರದರ್ಶಿಸಲು ಸೂಚಿಸಿದೆ, ಹೀಗೆ ಪ್ರೇಕ್ಷಕರಿಗೂ ನ್ಯಾಯಾಲಯದ ನಿರ್ದೇಶನ ತಿಳಿಯುವಂತೆ ಕ್ರಮ ಕೈಗೊಳ್ಳಲಾಗಿದೆ.