Home High Court/ಹೈಕೋರ್ಟ್ ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ವಿಚಾರಣೆಯನ್ನು 1 ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ವಿಚಾರಣೆಯನ್ನು 1 ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

30
0
NV Anjaria appointed as Chief Justice of Karnataka High Court

ಬೆಂಗಳೂರು : ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಒಂದು ವರ್ಷ ಕಾಲಮಿತಿ‌ ನಿಗದಿಪಡಿಸಿ ಮಹತ್ವದ ಆದೇಶ ನೀಡಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದ ಘಟನೆ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.​ ದೀಕ್ಷಿತ್​ ಅವರಿದ್ದ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ಜೊತೆಗೆ ಪ್ರಕರಣದ ವಿಚಾರಣೆಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯವು ಆರೋಪಿಗಳ ವಿರುದ್ಧದ ಪ್ರಕರಣವನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಬೇಕು. ಈ ಆದೇಶವನ್ನು ಹೈಕೋರ್ಟ್ ರಿಜಿಸ್ಟ್ರಾರ್​ ಅವರು ವಿಚಾರಣಾ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ರಾಜ್ಯ ಸರ್ಕಾರದ ಕ್ರಮಕ್ಕೆ ತೃಪ್ತಿ : ಪ್ರಕರಣದ ಸಂಸತ್ರಸ್ತೆಗೆ ಐದು ಲಕ್ಷ ರೂ. ಪರಿಹಾರ ಹಾಗೂ ಎರಡು ಎಕರೆ ಜಮೀನು ನೀಡಲಾಗಿದೆ. ಘಟನೆಗೆ ಕಾರಣರಾಗಿದ್ದ ಮೂವರು ಆರೋಪಿಗಳು ಪರಾರಿಯಾಗಿದ್ದವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ಮತ್ತು 23 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಕುರಿತಂತೆ ಹೈಕೋರ್ಟ್ ಸಂತೃಪ್ತಿ ವ್ಯಕ್ತಪಡಿಸಿದೆ.

ಸಂತ್ರಸ್ಥೆಯ ಹಿತದೃಷ್ಠಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಸಂತ್ರಸ್ಥೆಯ ಮನೆಗೆ ಭೇಟಿ ನೀಡಬೇಕು. ಕಲ್ಯಾಣ ಅಧಿಕಾರಿ ಸಂತ್ರಸ್ತೆ ಮತ್ತವರ ಕುಟುಂಬದ ಸದಸ್ಯರು ಜೀವನ ನಡೆಸುವುದಕ್ಕೆ ಅಗತ್ಯ ಮೂಲಸೌಲಭ್ಯ ಲಭ್ಯವಿರುವ ಬಗ್ಗೆ ಮತ್ತು ಅಂತಹ ಅವಶ್ಯಕತೆಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ವರದಿಯನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಈ ಕುರಿತಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ, ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸುತ್ತಿದ್ದರೂ, ಸುಮಾರು 50 ರಿಂದ 60 ಜನ ಪ್ರೇಕ್ಷಕರಂತೆ ನೋಡುತ್ತಿದ್ದು, ಮಹಿಳೆಯನ್ನು ರಕ್ಷಿಸಲು ಮುಂದಾಗಿರಲಿಲ್ಲ. ಕೆಲವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಸಾಮೂಹಿಕ ಜವಾಬ್ದಾರಿಯನ್ನು ನಿಗದಿಪಡಿಸಬೇಕಾಗುತ್ತದೆ. ಅಂತಹ ಸಂದರ್ಭ ಇದೀಗ ಬಂದಿದೆ. ಈ ರೀತಿಯ ಘಟನೆಗಳನ್ನು ಗಮನಿಸದರೆ ಸ್ವಾರ್ಥ ಸಾಧನೆಗಾಗಿ ಬದುಕುವಂತಾಗಿದೆ ಎಂದು ಎಂಬುದನ್ನು ಬಿಂಬಿಸುತ್ತದೆ ಎಂದು ಪೀಠ ಬೇಸರದಿಂದ ನುಡಿದಿತ್ತು.

LEAVE A REPLY

Please enter your comment!
Please enter your name here