ಬೆಂಗಳೂರು: ಹೈಕೋರ್ಟ್ ವಕೀಲೆ ಹಾಗೂ ಕೆಎಎಸ್ ಅಧಿಕಾರಿ ಪತ್ನಿ ಚೈತ್ರಾ ಗೌಡ ಅವರ ಆತ್ಮಹತ್ಯೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿ ವರ್ಗಾಯಿಸಲಾಗಿದೆ. ಮೇ 11ರಂದು ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ಕೆಐಡಿಬಿ ಅಧಿಕಾರಿ ಶಿವಕುಮಾರ್ ಎಂಬುವರ ಪತ್ನಿಯಾಗಿದ್ದ ಚೈತ್ರಾ ಗೌಡ ಹೈಕೋರ್ಟ್ ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೈತ್ರಾ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಸೂಕ್ತ ತನಿಖೆಗೆ ಆಗ್ರಹಿಸಿ ಬೆಂಗಳೂರು ನಗರ ವಕೀಲರ ಸಂಘದಿಂದ ಕೂಡ ಪೊಲೀಸ್ ಆಯುಕ್ತರಿಗೆ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆಯಲಾಗಿತ್ತು.
ಚೈತ್ರಾ ಅತ್ಯಂತ ದಿಟ್ಟ ಹಾಗೂ ಧೈರ್ಯವಂತೆ ಆಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಕೀಲರ ಸಂಘ ತಿಳಿಸಿತ್ತು.
ಈ ಸಂಬಂಧ ಆರಂಭದಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಚೈತ್ರಾ ಪತಿ ಶಿವಕುಮಾರ್ ಅವರನ್ನು ಕರೆದು ವಿಚಾರಣೆ ನಡೆಸಿದಾಗ ಪತ್ನಿಯೊಂದಿಗೆ ಯಾವುದೇ ವೈಷ್ಯಮ್ಯ ಇಲ್ಲ, ನಾವು ಅನ್ಯೋನ್ಯವಾಗಿದ್ದೆವು. ಅಲ್ಲದೆ, ವೃತ್ತಿ ವೈಷಮ್ಯ ಹಾಗೂ ಹಣಕಾಸಿನ ವಿಚಾರದಲ್ಲಿಯೂ ಯಾವುದೇ ಕಿರಿಕಿರಿ ಇರಲಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು ಎಂದು ಪೊಲೀಸ್ ಹೇಳಿದ್ದಾರೆ.
ಮತ್ತೊಂದೆಡೆ, ಮೃತಳ ಸಹೋದರ ಹಾಗೂ ಕುಟುಂಬಸ್ಥರನ್ನು ಕರೆದು ವಿಚಾರಣೆ ನಡೆಸಿದಾಗ ಆಸ್ತಿ ವಿಚಾರವಾಗಿ ಚೈತ್ರಾರೊಂದಿಗೆ ತಮಗೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಕಳೆದೊಂದು ವರ್ಷದಿಂದ ವೈಮನಸ್ಸು ಮೂಡಿತ್ತು ಎಂದು ಹೇಳಿಕೆ ನೀಡಿದ್ದರು.
ಮೂರು ತಿಂಗಳ ಹಿಂದೆಯಷ್ಟೇ ಕುಟುಂಬಸ್ಥರೊಂದಿಗೆ ಮಾತನಾಡುವಾಗ ಚೈತ್ರಾ ಸಾಯುವ ಮಾತು ಹೇಳಿದ್ದರು ಎನ್ನಲಾಗಿದ್ದು, ಕುಟುಂಬಸ್ಥರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಹೀಗಾಗಿ, ಅವರು ಮೂರು ತಿಂಗಳ ಹಿಂದೆಯೇ ಡೆತ್‍ನೋಟ್ ಬರೆದಿದ್ದರು.
ಆಸ್ತಿ ವಿಚಾರವಾಗಿ ಮನಸ್ತಾಪ ಹಾಗೂ ಖಿನ್ನತೆಯಿಂದಾಗಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತನಿಖೆಯಿಂದ ಗೊತ್ತಾಗಿದೆ. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಸಿಬಿ ತನಿಖೆ ಚುರುಕು: ಈ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಚೈತ್ರಾ ಜೊತೆಗೆ ಮಾತನಾಡಿರುವ ವ್ಯಕ್ತಿಗಳ ಕರೆ ಲಿಸ್ಟ್ ಮತ್ತು ಹಣಕಾಸು ವ್ಯವಹಾರದ ಪರಿಶೀಲನೆಗೆ ಮುಂದಾಗಿದೆ. ಅಲ್ಲದೆ, ಜೊತೆಗೆ ಚೈತ್ರಾ ಸಾವಿನ ಹಿಂದಿನ 15 ದಿನಗಳ ಸಿಸಿಟಿವಿ ಚೆಕ್ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಸಾವಿನ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ತಯಾರಿ ನಡೆಸಿರುವುದಾಗಿ ತಿಳಿದುಬಂದಿದೆ.
