ಬೆಂಗಳೂರು:
ಕೃಷ್ಣರಾಜಸಾಗರ (ಕೆಆರ್‌ಎಸ್ ಅಣೆಕಟ್ಟೆ)ದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ನಿರ್ಬಂಧ ವಿಧಿಸಿ ಹೈಕೋರ್ಟ್ಆ (Karnataka High Court) ದೇಶ ಹೊರಡಿಸಿದೆ.
ಮಂಡ್ಯ ಜಿಲ್ಲೆಯ ಚಿನಕುರಳಿ ಗ್ರಾಮದ ಸಿ.ಜಿ.ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಕೆಆರ್‌ಎಸ್ಅಣೆಕಟ್ಟೆ ಈಗಾಗಲೇ ಸಂಕಷ್ಟದಲ್ಲಿದೆ, ಕೆಆರ್‌ಎಸ್ಡ್ಯಾಂ ಬಳಿ ಹಲವು ಭಾರಿ ದೊಡ್ಡ ಶಬ್ಬಗಳು ಕೇಳಿ ಬಂದಿದೆ. ಅಣೆಕಟ್ಟಿನ ಬಳಿ ಗಣಿಗಾರಿಕೆ ನಡೆಸಿದರೆ ಅಪಾಯವಾಗುವ ಸಂಭವವಿದೆ ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಅಲ್ಲದೆ, ಧನ್ಬಾದ್ನಲ್ಲಿರುವ ಭಾರತೀಯ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಯಿಂದ ಕೆಆರ್‌ಎಸ್ ಅಣೆಕಟ್ಟೆ ಕುರಿತಂತೆ ವೈಜ್ಞಾನಿಕ ಸಮೀಕ್ಷೆಗಾಗಿ ಆದೇಶ ನೀಡಲಾಗಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವವರೆಗೂ ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿಯೂ ಗಣಿಗಾರಿಕೆ ನಡೆಯಬಾರದು ಎಂದು ನ್ಯಾಯಪೀಠವು ತಿಳಿಸಿದೆ.
ಕೆಆರ್‌ಎಸ್ಅಣೆಕಟ್ಟನ್ನು 1924ರಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಜೀವ ನೀಡುವ ನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು. ಅತ್ಯಂತ ಫಲವತ್ತಾದ ಮೈಸೂರು ಮತ್ತು ಮಂಡ್ಯದಲ್ಲಿ ನೀರಾವರಿಗೆ ಪ್ರಮುಖ ನೀರಿನ ಮೂಲವಾಗಿದೆ.
ಕೆಆರ್‌ಎಸ್ಜಲಾಶಯಕ್ಕೆ ಹಾನಿ ಮಾಡುವುದು ತಡೆಗಟ್ಟಬೇಕಿದೆ. ಇಲ್ಲಿ ಕೆಆರ್‌ಎಸ್ಸುರಕ್ಷತೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ವಿಭಾಗೀಯ ಪೀಠವು, ಸರಕಾರದ ನಿರ್ದೇಶನದಂತೆ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಲಾಗಿದೆ. ಹೀಗಾಗಿ, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿಸುವುದಿಲ್ಲ ಎಂದು ಹೇಳಿತು. ಈ ನಿಷೇಧವು ಅಸ್ತಿತ್ವದಲ್ಲಿರುವ ಗಣಿಗಾರಿಕೆ ಪರವಾನಗಿಗಳ ಮೇಲೂ ಅನ್ವಯಿಸುತ್ತದೆ ಅಥವಾ ಹಿಂದಿನ ಸುತ್ತಿನ ವ್ಯಾಜ್ಯಗಳಲ್ಲಿ ಉಚ್ಚ ನ್ಯಾಯಾಲಯವು ಅನುಮತಿ ನೀಡಿದ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.
ಕೆಆರ್‌ಎಸ್ಡ್ಯಾಂ ನಿರ್ಮಾಣಕ್ಕೆ ಜನರು ರಕ್ತ, ಬೆವರು ಹರಿಸಿದ್ದಾರೆ. ತೀ.ತಾ. ಶರ್ಮರ ಸರ್.ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕೆಆರ್ ಎಸ್ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ. ಆದರೆ ಕೆಆರ್‌ಎಸ್ಅಣೆಕಟ್ಟೆ ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆಗೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ? ಅಣೆಕಟ್ಟೆಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ. ಹೀಗಾಗಿ ಕೆಆರ್‌ಎಸ್ಅಣೆಕಟ್ಟೆ ಬಳಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: ಅರ್ಜಿದಾರರು ತಮ್ಮ ಜಮೀನಿನಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದ್ದರು.
ಜೊತೆಗೆ, ಕಾವೇರಿ ನಿರಾವರಿ ನಿಗಮದ ವತಿಯಿಂದ ನಡೆಸುವ ಪರೀಕ್ಷಾರ್ಥ ಬ್ಲಾಸ್ಟಿಂಗ್ ನಂತರ ಸಲ್ಲಿಸುವ ವರದಿಯನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರ ಕೈಗೊಳ್ಳಬಹುದಾದ ನಿರ್ಧಾರಗಳಿಗೆ ಬದ್ಧರಾಗಿರಬೇಕು. ಜೊತೆಗೆ, ವರದಿ ಬರುವವರೆಗೂ ಪರಿವರ್ತಿತ ಭೂಮಿಯಲ್ಲಿ ಉದ್ದೇಶಿತ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಈ ಷರತ್ತನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.