Home High Court/ಹೈಕೋರ್ಟ್ Karnataka High Court orders state government to establish building guidelines for 50...

Karnataka High Court orders state government to establish building guidelines for 50 sq m plots in Bengaluru| ಬೆಂಗಳೂರಲ್ಲಿ 50 ಚ.ಮೀ ನಿವೇಶನದಲ್ಲಿ ಕಟ್ಟಡ ನಿರ್ಮಾಣ: ಮಾರ್ಗಸೂಚಿ ರಚನೆಗೆ ಹೈಕೋರ್ಟ್ ನಿರ್ದೇಶನ

31
0
BBMP and High Court

ಬೆಂಗಳೂರು:

ರಾಜಧಾನಿ ಬೆಂಗಳೂರಿನಲ್ಲಿ 50 ಚ.ಮೀ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ಅಗತ್ಯ ಮಾರ್ಗಸೂಚಿಗಳನ್ನು ರಚನೆ ಮಾಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

50 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಅನುಮೋದನೆ ನಿರಾಕರಿಸಿದ್ದ ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ನಾಗರಾಜು ಮತ್ತು ಅನುಮೊದನೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಕೋರಿ ಕುಮಾರಿ ಕುಸುಮಾ ಮತ್ತಿತರರು ಹೈಕೋರ್ಟ್‍ಗೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಚದರ ಮೀಟರ್(600 ಚದರಡಿ)ಗಿಂತಲೂ ಕಡಿಮೆ ನಿವೇಶನಗಳಲ್ಲಿ ವಾಣಿಜ್ಯ ಆಸ್ತಿಗಳು ಸೇರಿದಂತೆ ಕಟ್ಟಡ ಯೋಜನೆಗಳಿಗೆ ಅಗತ್ಯವಿರುವ ಮಾರ್ಗಸೂಚಿ ರಚನೆ ಮಾಡುವಂತೆ ಹೇಳಿದೆ. ಅಲ್ಲದೆ, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು 2024ರ ಜ.29ಕ್ಕೆ ನಿಗದಿಪಡಿಸಿದೆ.

ರಾಜಧಾನಿ ಬೆಂಗಳೂರಿನಂತಹ ಮಹಾನಗರಗಳಲ್ಲಿನ ಭೂಮಿಯ ಮೌಲ್ಯವನ್ನು ಪರಿಗಣಿಸಿದರೆ 50 ಚದರ ಮೀಟರ್ ಗಿಂತಲೂ ಕಡಿಮೆ ಅಳತೆಯ ನಿವೇಶನ ಖರೀದಿಸುವುದು ಅನೇಕರ ಕನಸಾಗಿರುತ್ತದೆ. ಜನರು ಇಡೀ ಜೀವಮಾನದಲ್ಲಿ ಉಳಿಸಿದ ಹಣದೊಂದಿಗೆ ಸಾಲ ಮಾಡಿ ಭೂಮಿ ಖರೀದಿಸಲು ಮುಂದಾಗುತ್ತಾರೆ ಎಂದು ಹೈಕೋರ್ಟ್ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ರೀತಿಯ ಸಣ್ಣ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ಅಗತ್ಯ ಮಾರ್ಗಸೂಚಿಗಳನ್ನು ರಚನೆ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ಕೊಟ್ಟಿದೆ.

ಬಿಬಿಎಂಪಿ ಬೈ-ಲಾ 2003ರ 7.2ರ ಪ್ರಕಾರ, ಆರ್ಥಿಕ ದುರ್ಬಲ ವರ್ಗಗಳು(ಇಡಬ್ಲ್ಯೂಎಸ್), ಕಡಿಮೆ ಆದಾಯವಿರುವ ಗುಂಪುಗಳು(ಎಲ್‍ಐಜಿ), ಕೊಳಗೇರಿಗಳು ಸೇರಿದಂತೆ ಜನನಿಬಿಡ ಪ್ರದೇಶಗಳ ಪುನರ್ ನಿರ್ಮಾಣ ಮತ್ತು ಕುಟುಂಬಗಳ ಬೇರ್ಪಡುವುದರಿಂದ ಎದುರಾಗುವ ಪ್ರಕರಣಗಳಲ್ಲಿ ಬೈ-ಲಾ ನಿಯಮಾ 7.2 ಪ್ರಕಾರ 50 ಚದರ ಮೀಟರ್ ಗಿಂತಲೂ ಕಡಿಮೆ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ಅನುಮತಿ ಇರಲಿದ್ದು, ಈ ಸಂಬಂಧ ಅಗತ್ಯವಿರುವ ಮಾರ್ಗಸೂಚಿಗಳನ್ನು ರಚನೆ ಮಾಡಲು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು:

2017ರಿಂದ 2023ರ ಅವಧಿಯಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ 50 ಚದರ ಮೀಟರ್ ಗಿಂತಲೂ ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿದ್ದವರಿಗೆ ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲು ನಿರಾಕರಿಸಿತ್ತು. ಕಾನೂನುಬಾಹಿರವಾಗಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅಂತಹ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹಲವು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಕೋರ್ಟ್, ಮಾರ್ಗಸೂಚಿಗಳ ರಚನೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

LEAVE A REPLY

Please enter your comment!
Please enter your name here